ಅರೇಹಳ್ಳಿ: ಇಂದಿನಿಂದ 40 ದಿನ ತಪಸ್ಸು ಕಾಲವಾಗಿದ್ದು ಏಸುವಿನ ಪಾಡು,ಶಿಲುಬೆಯ ಮರಣ ಹಾಗೂ ಅವರ ಪುನರುತ್ಥಾನವನ್ನು ಧ್ಯಾನಿಸಿ ಈಸ್ಟರ್ ಹಬ್ಬವನ್ನು ಬರಮಾಡಿಕೊಳ್ಳಲು ಪೂರ್ವ ತಯಾರಿ ಮಾಡಿಕೊಳ್ಳುವ ಸಂದರ್ಭವಾಗಿದೆ ಎಂದು ಸಂತಯೋವಾನ್ನರ ಕ್ರೈಸ್ತದೇವಾಲಯದ ಧರ್ಮಗುರು ಫಾ.ಕಿರಣ್ ಮೆಲ್ವಿನ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಸಂತ ಯೊವಾನ್ನರ ಕ್ರೈಸ್ತ ದೇವಾಲಯದಲ್ಲಿರುವ ವಿಭೂತಿ ಬುಧವಾರದ ಅಂಗವಾಗಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೈಸ್ತ ಬಾಂಧವರಿಗೆ ಪ್ರಬೋಧನೆ ನೀಡುತ್ತಾ ಮಾತನಾಡಿದ ಅವರು, ವಿಭೂತಿ ಬುಧವಾರದಂದು ಹಣೆ ಮೇಲೆ ವಿಭೂತಿ ಹಚ್ಚಲಾಗುತ್ತದೆ. ಇದರರ್ಥ ಮನುಷ್ಯ ಮಣ್ಣಿನಿಂದ ಬಂದು ಕೊನೆಗೆ ಮಣ್ಣಿಗೆ ಸೇರುತ್ತಾನೆ ಎಂಬುದಾಗಿದೆ.
ದೇವರ ದಯೆಯಿದ್ದವನು ಮಾತ್ರ ದೇವರೊಂದಿಗೆ ಶಾಶ್ವತವಾಗಿ ಬಾಳುತ್ತಾನೆ. ಹೀಗೆ ಬಾಳ ಬೇಕೆಂದರೆ ಪಶ್ಚಾತಾಪವನ್ನು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಬೇಕು. ಪಾಸ್ಕ ಕಾಲದಲ್ಲಿ ಪ್ರಾರ್ಥನೆ, ದಾನ,ಧರ್ಮ,ಉಪವಾಸ, ಶಿಲುಬೆಯ ಧ್ಯಾನ ಇವುಗಳ ಮೂಲಕ ದೇವರ ಪ್ರೀತಿ ಹಾಗೂ ಪರರ ಪ್ರೀತಿಯನ್ನು ಗಳಿಸುವುದಾಗಿದೆ ಎಂದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಸಂತ ಯೊವಾನ್ನರ ಕ್ರೈಸ್ತ ದೇವಾಲಯದಲ್ಲಿ ವಿಭೂತಿ ಬುಧವಾರದ ಅಂಗವಾಗಿ ಕ್ರೈಸ್ತ ಭಕ್ತಾಧಿಗಳ ಹಣೆಗೆ ವಿಭೂತಿ ಹಚ್ಚಲಾಯಿತು.