ಅಹ್ಮದಾಬಾದ್: ಹತ್ತನೇ ಪ್ರೊ ಕಬಡ್ಡಿ ಋತುವನ್ನು ಪಾಟ್ನಾ ಪೈರೇಟ್ಸ್ ಭರ್ಜರಿ ಜಯದೊಂದಿಗೆ ಆರಂಭಿಸಿದೆ. ಬುಧವಾರದ ಮುಖಾಮುಖಿಯಲ್ಲಿ ಅದು 50-28 ಅಂತರದಿಂದ ತೆಲುಗು ಟೈಟಾನ್ಸ್ ತಂಡವನ್ನು ಮುಳುಗಿಸಿತು. ಇದು ಟೈಟಾನ್ಸ್ಗೆ ಎದುರಾದ ಸತತ 2ನೇ ಸೋಲು.
ಪಾಟ್ನಾ ಪರ ರೈಡರ್ಗಳಾದ ಸಚಿನ್ (14 ಅಂಕ), ಮನ್ಜ್ಪಿತ್ (8 ಅಂಕ), ಆಲ್ರೌಂಡರ್ ಅಂಕಿತ್ (5 ಅಂಕ) ಉತ್ತಮ ಪ್ರದರ್ಶನ ನೀಡಿದರು. ತೆಲುಗು ಟೈಟಾನ್ಸ್ ತಂಡದಲ್ಲಿ ನಾಯಕ ಪವನ್ ಸೆಹ್ರಾವತ್ ಏಕಾಂಗಿಯಾಗಿ ಹೋರಾಡಿ 11 ಅಂಕ ಗಳಿಸಿದರು.
ಯೋಧಾಸ್ ವಿಜಯ: ದಿನದ ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್ 57-27 ಅಂತರದಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿತು. ಇದರೊಂದಿಗೆ ಯೋಧಾಸ್ ತನ್ನ 2ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಿತು.
ಯೋಧಾಸ್ ತಂಡದ ಪ್ರಚಂಡ ಜಯಕ್ಕೆ ಕಾರಣರಾದವರು ರೈಡರ್ ಸುರೇಂದರ್ ಗಿಲ್ (13 ಅಂಕ) ಮತ್ತು ನಾಯಕ ಪ್ರದೀಪ್ ನರ್ವಾಲ್ (12 ಅಂಕ). ಡಿಫೆಂಡರ್ ಸುಮಿತ್ 8 ಅಂಕ ತಂದಿತ್ತರು. ಯೋಧಾಸ್ ಅಬ್ಬರದ ಮುಂದೆ ಹರ್ಯಾಣಕ್ಕೆ ತಲೆ ಎತ್ತಿ ನಿಲ್ಲಲಾಗಲಿಲ್ಲ. ಡಿಫೆಂಡರ್ ಮೋಹಿತ್ ಹಾಗೂ ರೈಡರ್ ವಿನಯ್ ತಲಾ 5 ಅಂಕ ಗಳಿಸಿದ್ದೇ ಉತ್ತಮ ನಿರ್ವಹಣೆ ಎನಿಸಿತು.