ದೊಡ್ಡಬಳ್ಳಾಪುರ: ಭಾರತದ ಉತ್ತಮ ಭವಿಷ್ಯ ನಿರ್ಮಾಣದ ಗುರಿ ಹಾಗೂ ದೂರ ದೃಷ್ಟಿಯೊಂದಿಗೆ ರಾಜ್ಯದಲ್ಲಿ 9 ಯುವಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿ ಯವಜನರಿಗೆ ಆಧ್ಯತೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಇಡೀ ದೇಶದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೊಳಿಸಿರುವುದು ಕಾಂಗ್ರೆಸ್ ಪಕ್ಷ, ಬ್ಯಾಂಕ್ಗಳ ರಾಷ್ಟ್ರೀಕರಣ, ಭೂಸುಧಾರಣೆ ಕಾಯ್ದೆ ಆರಂಭಿಸಿ ಆಹಾರ ಭದ್ರತಾ ಕಾಯ್ದೆಯವರೆಗೆ ವಿವಿಧ ಭದ್ರತಾ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಿದ್ದು, ರಾಷ್ಟ್ರದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಅಣೆಕಟ್ಟುಗಳನ್ನು ಕಟ್ಟಿ ಬಡತನ ನಿರ್ಮೂಲನೆಗೆ ಪಣ ತೊಟ್ಟಿದ್ದು ಕಾಂಗ್ರೆಸ್ ಎಂದ ಅವರು, ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ.
ಆದರೆ ದೇಶದ ಆಸ್ತಿಗಳನ್ನ ಕಾಂಗ್ರೆಸ್ ಎ ಪಕ್ಷ ಎಂದೂ ಖಾಸಗಿಯವರಿಗೆ ಮಾರಾಟ ಮಾಡಿಲ್ಲ ಎನ್ನುವುದು ಮತದಾರರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ ಮಾಜಿ ಸಚಿವರು ತಾವು ಅಧಿಕಾದಲ್ಲಿದ್ದಾಗ ಮಾಡಿರುವ ಕೆಲಸಗಳನ್ನು ನೋಡಿ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಚಳವಳಿ ನಡೆಸುತ್ತಿರುವಾಗ ಇವರ ಗೆಲುವು ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ತಮ್ಮ ಎದುರಾಳಿ ಡಾ.ಕೆ.ಸುಧಾಕರ್ ಅವರ ಹೆಸರು ಹೇಳದೆ ವ್ಯಂಗ್ಯ ಮಾಡಿದರು. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿದರು.
ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ ಅನಂತ ರಾಮ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾಂತರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥರೆಡ್ಡಿ, ಮುಖಂಡರಾದ ಸಿ.ಡಿ.ಸತ್ಯನಾರಾಯಣ ಗೌಡ, ಕೆ.ಎಂ.ಕೃಷ್ಣಮೂರ್ತಿ ಆದಿತ್ಯ ನಾಗೇಶ್, ರಾಮಕೃಷ್ಣ, ಬಿ.ಮುನಿರಾಜು, ಆಂಜನಮೂರ್ತಿ ಮುಂತಾದವರು ಉಪಸ್ಥಿತರಿದ್ದರು.