ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದ ಬಿಸಿಸಿಐ ಇದೀಗ ಟೀಂ ಇಂಡಿಯಾದ ಎಲ್ಲ ಆಟಗಾರರಿಗೂ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಹೌದು.. ರೋ-ಕೋ ಮಾತ್ರವಲ್ಲ, ಭಾರತದ ಎಲ್ಲಾ ಪ್ರಸ್ತುತ ಆಟಗಾರರು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ಆಡುವುದು ಕಡ್ಡಾಯ ಎಂದು ಬಿಸಿಸಿಐ ಹೇಳಿದ್ದು, ಡಿಸೆಂಬರ್ 24 ರಿಂದ ಪ್ರಾರಂಭವಾಗುವ ಮುಂಬರುವ ವಿಜಯ್ ಹಜಾರೆ ಟ್ರೋಫಿಯ ಕನಿಷ್ಠ ಎರಡು ಏಕದಿನ ಪಂದ್ಯಗಳನ್ನು ಆಡುವುದನ್ನು ಕಡ್ಡಾಯಗೊಳಿಸಿದೆ.
ಇದು ಪ್ರಸ್ತುತ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುವ ಎಲ್ಲಾ ಆಟಗಾರರಿಗೆ ಅನ್ವಯವಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯ ಡಿಸೆಂಬರ್ 19ರಂದು ಅಹಮದಾಬಾದ್ನಲ್ಲಿ ನಡೆಯಲಿದ್ದು, ಬಳಿಕ ಜನವರಿ 11, 2026ರಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯಲಿದೆ. ಹೀಗಾಗಿ ಈ 2 ಪಂದ್ಯಗಳ ನಡುವೆ ಮೂರು ವಾರಗಳ ಅಂತರವಿದ್ದು, ಹೀಗಾಗಿ ಕ್ರಿಕೆಟ್ ಮಂಡಳಿಯು ತನ್ನ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕೆಂದು ಬಯಸುತ್ತದೆ ಎಂದು ತಿಳಿದುಬಂದಿದೆ.



