ಬೆಂಗಳೂರು: ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಸರಕಾರ, ಶ್ರೀಮಂತ ದೇವಾಲಯಕ್ಕೂ ಕನ್ನ ಹಾಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಡಿ. `ಸರಕಾರ ನಡೆಸಲು ನಮ್ಮ ಕೈಯಲ್ಲಿ ಆಗುತ್ತಿಲ್ಲ; ಹಣಕಾಸಿನ ತೊಂದರೆ ಇದೆ’ ಎಂದು ತಿಳಿಸಿ ಬಂದ ದಾನಿಗಳಿಂದ ಹಣ ಸಂಗ್ರಹಿಸಬಹುದು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವುದಾಗಿ ತಿಳಿಸಿದರು.
ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅತ್ಯಂತ ಹೆಚ್ಚು ತೆರಿಗೆಯನ್ನು ಅದು ಸಂಗ್ರಹ ಮಾಡುತ್ತದೆ. ಇಂಥ ಕರ್ನಾಟಕ ರಾಜ್ಯದ ಪರಿಸ್ಥಿತಿ ಹೀಗಾಗಿದೆ ಎಂಬುದು ನಿಜಕ್ಕೂ ದುರದೃಷ್ಟ. ಸರಕಾರ ಈ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗ್ಯಾರಂಟಿಗೆ ನಮ್ಮ ಟೀಕೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದನ್ನು ಅನುಷ್ಠಾನಕ್ಕೆ ತರುವುದು ಅವರ ಕರ್ತವ್ಯವಾಗಿದೆ. ಅವರು ಕೊಟ್ಟಿರುವ ಭರವಸೆಗಳನ್ನು ಈಡೇರಿಸಬೇಕಿದೆ. ಆದರೆ, ಅದರ ಅರ್ಥ ರಾಜ್ಯದಲ್ಲಿ ಅಭಿವೃದ್ಧಿ ಮಾಡಬಾರದು ಎಂದಲ್ಲ ಎಂದು ತಿಳಿಸಿದರು.
ನಾವು ಶಾಸಕರು ಕ್ಷೇತ್ರಕ್ಕೆ ಹೋದಾಗ ರಸ್ತೆಗಳು, ಶಾಲಾ ಕೊಠಡಿ, ಆಸ್ಪತ್ರೆಗಳ ಬಗ್ಗೆ ಜನರು ನಮ್ಮನ್ನು ಕೇಳುತ್ತಾರೆ. ಆದರೆ, 224 ಕ್ಷೇತ್ರಗಳ ಯಾವುದೇ ಒಬ್ಬ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ವಿಚಾರದಲ್ಲಿ ಮಾತನಾಡಲು ಸಾಧ್ಯವೇ ಇಲ್ಲ. ಯಾಕೆಂದರೆ, ರಾಜ್ಯ ಸರಕಾರ ಒಂದು ರೂಪಾಯಿಯನ್ನೂ ಅನುದಾನವಾಗಿ ಕೊಡುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯ ಸರಕಾರವು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಒಂದು ರೂಪಾಯಿ ಅನುದಾನವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು. ಸರಕಾರಿ ನೌಕರರಿಗೆ ಸಂಬಳ ಕೊಡತಕ್ಕಂಥ ಸಾಧ್ಯತೆ ಕಡಿಮೆ ಆಗುತ್ತಿದೆ. ಅಂಥ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.