ಹೊಸಕೋಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನ ಗ್ರಾಮೀಣ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೆನರಾ ಬ್ಯಾಂಕ್ ವಲಯದ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್ ತಿಳಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದವರ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆಗಳನ್ನ ರೂಪಿಸಿದೆ. ಈ ಯೋಜನೆಗಳನ್ನ ಪಡೆದಂತಹ ಫಲಾನುಭವಿಗಳ ಜೊತೆ ಸಂವಾದ ಹಾಗೂ ಪಡೆಯದೆ ಇರುವಂತಹ ಫಲಾನುಭವಿಗಳಿಗೂ ಸಹ ಯೋಜನೆಗಳನ್ನು ತಲುಪಿಸಬೇಕು ಎನ್ನುವ ದೃಷ್ಟಿಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ರೂಪಿಸಿದೆ.
ಈ ಕಾರ್ಯಕ್ರಮದ ಮೂಲಕ ಫಲಾನುಭವಿಗಳ ಜೊತೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಸಂವಾದ ಮಾಡುವ ಕಾರ್ಯಕ್ರಮ ಇದಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿಯೊಂದು ಮನೆಗೂ ಕೂಡ ತಲುಪಿಸಬೇಕು ಎನ್ನುವ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿಯ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕುಗಳ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ: ಪ್ರಮುಖವಾಗಿ ಮುದ್ರಾ ಯೋಜನೆ, ಜನಧನ್ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸನ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನ ಎಲ್ಇಡಿ ಪರದೆಯ ವಾಹನದೊಂದಿಗೆ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕೆನರಾ ಬ್ಯಾಂಕ್ ರೀಜನಲ್ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಉದ್ಯಮಶೀಲತೆ, ಕೌಶಲ್ಯಾಭಿವೃದ್ದಿ, ಎಲೆಕ್ಟ್ರಾನಿಕ್ ಮತ್ತು ಟೆಕ್ನಾಲಜಿ ಇಲಾಖಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾಗಿಯಾಗಿದ್ದರು.ನವದೆಹಲಿಯಿಂದ ನೇರಪ್ರಸಾರ ಆದಂತಹ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮವನ್ನು ಸಾರ್ವಜನಿಕರು ವೀಕ್ಷಿಸಲು ಬೃಹದಾಕಾರದ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು.
ಕೇಂದ್ರ ಸಚಿವ ರಾಜಿವ್ ಚಂದ್ರಶೇಖರ್ ಅವರು ಸಾರ್ವಜನಿಕರ ಜೊತೆಯಲ್ಲೆ ಕುಳಿತು ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮವನ್ನು ಸುಮಾರು 30 ನಿಮಿಷಗಳ ಕಾಲ ವೀಕ್ಷಣೆ ಮಾಡಿದರು. ನಂತರ ಆಯೋಜಕರಿಂದ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಾಶಯ ಕೋರಿದರು.ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯ ಕಿರುಪುಸ್ತಕ ಹಾಗೂ 2024ರ ದಿನದರ್ಶಿಯನ್ನು ವಿತರಿಸಲಾಯಿತು.