ಮಧುಗಿರಿ: ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತೆಯ ಮನೆ ಬಾಗಿಲಿಗೆ ಸೇವೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಿನ ಕಸಬಾ ಹೋಬಳಿಯ ದೊಡ್ಡವೀರಗೊಂಡನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಬಾಣದರಂಗಯ್ಯ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಮ್ಮ ಗ್ರಾಮ, ನಮ್ಮ ಸಮಸ್ಯೆ ಮತ್ತು ಪರಿಹಾರ ಎಂಬ ವಿನೂತನ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮದ ಚರಂಡಿ ಸ್ವಚ್ಛಗೊಳಿಸಿ, ಕೆಟ್ಟ ಬೀದಿ ದೀಪ ಸರಿಪಡಿಸಿ, ಸಮರ್ಪಕ ನಲ್ಲಿ ನೀರು ಒದಗಿಸಿ ಮಾತನಾಡುತ್ತಿದ್ದ ಅವರು ಹಂತ ಹಂತವಾಗಿ ಈ ಪಂಚಾಯಿತಿಯ ಪ್ರತಿ ಗ್ರಾಮವನ್ನು ಮಾದರಿ ಗ್ರಾಮವಾಗಿ ನಿರ್ಮಿಸುವ ನಿಟ್ಟಿನಲ್ಲಿ ಸಮಗ್ರ ಗ್ರಾಮ ಪಂಚಾಯಿತಿಯ ಸೇವೆಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು ಎಂದರು.
ಈ ಕಾರ್ಯಕ್ರಮ ನಿತ್ಯ ನೂತನ ಹಾಗೂ ನಿರಂತರವಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಕ್ಕೂ ಈ ಸೇವೆ ಒದಗಿಸಲಾಗುವುದೆಂದರು.ಈ ಕಾರ್ಯಕ್ರಮದ ಸಾಕಾರಕ್ಕೆ ಗ್ರಾಮಸ್ಥರು ಹಾಗೂ ಯುವ ಜನತೆಯ ಸಹಕಾರವನ್ನು ಪಡೆಯಲಾಗುವುದೆಂದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ ಈ ವಿನೂತನ ಕಾರ್ಯಕ್ರಮಕ್ಕೆ ನಾನು ನಮ್ಮ ಸಿಬ್ಬಂದಿ ಮತ್ತು ಎಲ್ಲರೂ ಕೈ ಜೋಡಿಸುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿದ್ದು, ಜನರ ಮನ್ನಣೆಗೆ ಪಾತ್ರ ವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುಳಾ, ಕಾರ್ಯದರ್ಶಿ ನವೀನ್, ಗ್ರಾಮಸ್ಥರಾದ ರಂಗಪ್ಪ ನಾಗರಾಜು ಮತ್ತು ಇತರರು ಉಪಸ್ಥಿತರಿದ್ದರು.
Leave a Review