ಮಾಗಡಿ: ಪಂಚಾಯ್ತಿಗಳಲ್ಲಿ ಗ್ರಾಮ ಸಭೆಗಳು ನಡೆಯುವುದರಿಂದ ಮಾಹಿತಿ ದೊರೆಯುತ್ತವೆ.ಇದರಿಂದ ರೈತರಿಗೆ ಸಾಮಾನ್ಯ ಜನರಿಗೆ ಸಹಕಾರಿಯಾಗುತ್ತದೆ ಎಂದು ಕಣ್ಣೂರು ಗ್ರಾಪಂ ಅದ್ಯಕ್ಷೆ ಮಹಾದೇವಮ್ಮ ಪುಟ್ಟರಾಜು ಹೇಳಿದರು.
ಕಣ್ಣೂರು ಗ್ರಾಪಂ ಕಚೇರಿಯ ಮುಂಭಾಗದಲ್ಲಿ 2023:24 ನೇ ಸಾಲಿನ ಗ್ರಾಮಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಲು ಈ ಗ್ರಾಮ ಸಭೆಯನ್ನು ಏರ್ಪಡಿಸಲಾಗಿದೆ. 2022:23 ನೇ ಸಾಲಿನ
ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ,ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ(ಗ್ರಾಮೀಣ)ಯಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಜೊತೆಗೆ 2024:25 ನೇ ಸಾಲಿನ ಬಜೆಟ್ ತಯಾರಿಸುವ ಬಗ್ಗೆ ಈ ಗ್ರಾಮ ಸಭೆಯನ್ನು ಕರೆಯಲಾಗಿದ್ದು ಅರ್ಹ ನಿರ್ಗತಿಕರಿಗೆ ವಸತಿ,,ನಿವಾಸ್ ಯೋಜನೆಯಡಿಯಲ್ಲಿ ಸೂಕ್ತವಾದವರನ್ನು ಆಯ್ಕೆ ಮಾಡಲಾಗುವುದು.ಸರಕಾರದ ನಿಯಮದಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೇಸಿಗೆ ಪ್ರಾರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹದೇವಮ್ಮ ತಿಳಿಸಿದರು.
ಪಿಡಿಒ ಸೀಗೇಕುಪ್ಪೆ ಕಾಂತರಾಜು ಮಾತನಾಡಿ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರದ ಗೆಜೆಟ್ ನಿಯಮಾವಳಿಯ ಪ್ರಕಾರವಾಗಿಯೇ ಮನೆಗಳ ವಾರಸುದಾರರಲ್ಲಿ ಕಂದಾಯ ವಸೂಲಿ ಮಾಡಲಾಗುತ್ತಿದೆ.ಗ್ರಾಪಂ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳು ಸಾಮಾನ್ಯ ಜನರಿಗೆ ತಲುಪಬೇಕಾದರೆ ಅಧಿಕಾರಿಗಳಾದ ನಮ್ಮಗಳ ಜೊತೆಗೆ ಜನಪ್ರತಿನಿಧಿಗಳು ಕೈ ಜೋಡಿಸಿದರೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
ಗ್ರಾಮ ಸಭೆಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳನ್ನು ವಿವರಿಸುತ್ತಾರೆ.ಇದನ್ನು ಜನರು ಅರ್ಥೈಸಿಕೊಂಡು ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು ಎಂದು ಕಾಂತರಾಜು ವಿವರಿಸಿದರು.ಮಾಜಿ ಅದ್ಯಕ್ಷ ಹಾಲಿ ಸದಸ್ಯರಾದ ಕೆ.ಎಸ್.ಜಗದೀಶ್ ಮಾತನಾಡಿ ಕಣ್ಣೂರು ಗ್ರಾಪಂಯು ತಾಲ್ಲೂಕಿನ ಗಡಿ ಗ್ರಾಪಂ ಆಗಿದೆ.
ಈ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ರಸ್ತೆ ಚರಂಡಿ ಸೇರಿದಂತೆ ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಅವರಲ್ಲಿ ಮನವಿ ಮಾಡಲು ಪಂಚಾಯ್ತಿಯ ಪ್ರತಿಯೊಬ್ಬ ಪ್ರತಿನಿಧಿಗಳ ನಿಯೋಗವನ್ನು ಕರೆದೊಯ್ದು ಮನವಿ ಮಾಡಿ ಪಂಚಾಯತಿ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಉಪಾದ್ಯಕ್ಷ ರವೀಶ್, ಸದಸ್ಯರಾದ ಮಮತಾ ಕಿರಣ್,ಕೆ.ಎಚ್.ಪ್ರಶಾಂತ್, ಎಚ್.ಜಿ.ಮುನಿಸ್ವಾಮಣ್ಣ, ಪಾರ್ವತಮ್ಮ ಶಿವರಾಮ್, ಚಂದ್ರಕಲಾ ಟಿ.ಆರ್.ಚೌಡರಂಗಶೆಟ್ಟಿ, ಎಸ್.ಕೆ.ಲಕ್ಷ್ಮೀನರಸಿಂಹಸ್ವಾಮಿ, ಭಾಗ್ಯಮ್ಮ ಶ್ರೀಧರ್, ಕಾರ್ಯದರ್ಶಿ ಸಿ.ಪ್ರಕಾಶ್, ಸುಗ್ಗನಹಳ್ಳಿ ರಂಗಸ್ವಾಮಯ್ಯ, ಗುತ್ತಿಗೆದಾರ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.