ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದಾಗಿ ರೈತನೋರ್ವ ಗಂಭಿರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಘಟನೆ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಈ ವೇಳೆ ಗ್ರಾಮಸ್ಥರು ಸಿಬ್ಬಂದಿಗೆ ಥಳಿಸಿದ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಮಹದೇವನಗರದ ಹೊರವಲಯದಲ್ಲಿ ಪದೇ ಪದೆ ಹುಲಿ ದಾಳಿ ನಡೆಯುತ್ತಿದ್ದು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಾ ಇಲಾಖೆ ಸಿಬ್ಬಂದಿಗೆ ಥಳಿಸಿ ಆಕ್ರೋಶ ಹೊರ ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
ವರ್ಷದ ಹಿಂದೆ ಹಾದನೂರು ಒಡೆಯನಪುರದ ಮಹದೇವೇಗೌಡ ಎಂಬ ರೈತ ಹುಲಿ ದಾಳಿಗೆ ಬಲಿಯಾಗಿದ್ದರು.ನಂಜನಗೂಡು ತಾಲೂಕಿನ ಮಹದೇವ ನಗರದ ಹೊರವಲಯದಲ್ಲಿ ಹುಲಿಯ ಓಡಾಟ ಆತಂಕಕ್ಕೆ ಕಾರಣವಾಗಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳೀಯರ ಮೊಬೈಲ್ನಲ್ಲಿ ಹುಲಿ ಓಡಾಟದ ದೃಶ್ಯ ಸೆರೆಯಾಗಿದೆ.
ಮತ್ತೊಂದೆಡೆ ಗಾಯಾಳು ವೀರಭದ್ರ ಭೋವಿ ಅವರನ್ನು ಶಾಸಕ ದರ್ಶನ್ ಧೃವನಾರಾಯಣ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.