ಚಿಕ್ಕಮಗಳೂರು: ಕಾಡಾನೆ ದಾಳಿಯಿಂದಾಗಿ ಕಾರ್ಮಿಕ ಮಹಿಳೆಯೋರ್ವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಬಂದ ಶಾಸಕಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಡದಾಳು ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಹೆಡದಾಳು ಗ್ರಾಮದಲ್ಲಿ ಕಾರ್ಮಿಕ ಮಹಿಳೆಯೆನ್ನಲಾದ ಮೀನಾ(45) ಎಂಬುವರು ತೋಟಕ್ಕೆ ಹೋಗುವ ವೇಳೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಆನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಈ ಭಾಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕಾಡಾನೆ ಹಾವಳಿಯಿಂದ ಜನ ನೊಂದಿದ್ದಾರೆ. ಎಷ್ಟೇ ಬಾರಿ ಗಮನಕ್ಕೆ ತಂದರೂ ಆನೆಗಳನ್ನು ಬೇರೆ ಕಡೆ ಕಳಿಸುವಲ್ಲಿ ವಿಫಲರಾಗಿದ್ದಾರೆ.
ಇಂದು ಮುಖ್ಯಮಂತ್ರಿಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆನೆ ದಾಳಿ ಸಂಬಂಧ ಸೂಕ್ತ ಕ್ರಮ ಜರುಗಿಸದೆ ಹೋದರೆ ನಾವು ನಿಮ್ಮನ್ನು ಇಲ್ಲಿಂದ ಬಿಡುವುದಿಲ್ಲ.
ಇಲ್ಲಿಯೇ ಕೂರಿ ಎಂದು ತಾಕೀತು ಮಾಡಿ ಮುಖ್ಯಮಂತ್ರಿಯವರು ಬರುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಗ್ರಾಮಸ್ಥರ ಆಕ್ರೋಶದಿಂದಾಗಿ ಶಾಸಕಿ ನಯನ ಮೋಟಮ್ಮ ಕೆಲ ಕಾಲ ಕಕ್ಕಾಬಿಕ್ಕಿಯಾಗಿದ್ದಾರೆ.