ಬೆಂಗಳೂರು: ಲೋಕಸಭಾ ಚುನಾವಣಾ ಸಂಬಂಧ ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿರುವ ಭಾರತೀಯ ಜನತಾಪಾರ್ಟಿಯಲ್ಲಿ ಟಿಕೆಟ್ ಸಿಗದೆ ಅತೃಪ್ತರಾಗಿರುವವರ ಮನವೊಲಿಕೆಗೆ ಬಿರುಸಿನ ಚಟುವಟಿಕೆಗಳು ನಡೆದಿವೆ.
ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಮ್ಮ ಪುತ್ರನಿಗೆ ದೊರೆಯಲಿಲ್ಲ ಎಂದು ಮುನಿಸಿಕೊಂಡಿರುವ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರನ್ನು ಮನವೊಲಿಸಿ ಅವರ ಅತೃಪ್ತಿಯನ್ನು ಶಮನಗೊಳಿಸಲು ಖುದ್ದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಿಲ್ಲೆಯವರೇ ಆದ ಪಕ್ಷದ ಮತ್ತೋರ್ವ ಹಿರಿಯ ಮುಖಂಡ ಮಾಜಿ ಸಚಿವ ಅರಗಜ್ಞಾನೇಂದ್ರ ಅವರಿಗೆ ಈಶ್ವರಪ್ಪ ಮನವೊಲಿಸುವ ಜವಾಬ್ದಾರಿ ನೀಡಿದ್ದಾರೆ ಎಂದುಹೇಳಲಾಗುತ್ತಿದೆ.ಇಂದು ಸಂಜೆ ಈಶ್ವರಪ್ಪ ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತೀರ್ಮಾನಕೈಗೊಳ್ಳಲಿದ್ದು, ಆ ಸಭೆ ಆರಂಭಕ್ಕೂ ಮುನ್ನ ಈಶ್ವರಪ್ಪ ಮನವೊಲಿಸುವ ಕಾರ್ಯವಾಗಬೇಕು ಎಂದು ಜ್ಞಾನೇಂದ್ರ ಅವರಿಗೆ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೋರ್ವ ಟಿಕೆಟ್ ವಂಚಿತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸಹ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ತಮಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಎಲ್ಲದರ ಮಧ್ಯೆ ಅರುಣ್ ಪುತ್ತಿಲ ಅವರು ಸಹ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಪುತ್ತಿಲ ಅವರ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಮುಖ ಪದಾಧಿಕಾರಿಯಾಗಿರುವ ಸುನೀಲ್ ಕುಮಾರ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಉಪಸ್ಥಿತರಿದ್ದರು ಎನ್ನಲಾಗಿದೆ.
ಯಡಿಯೂರಪ್ಪರ ನಿವಾಸದ ಬಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ಕುಮಾರ್ ಮಾತನಾಡಿ, ಪುತ್ತಿಲ ಪರಿವಾರ ಮೋದಿ ಪರಿವಾರದ ಜೊತೆಗೆ ಇರಬೇಕೆಂದು ನಿಶ್ಚಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಅಭ್ಯರ್ಥಿಯ ಗೆಲುವುಗಾಗಿ ಶ್ರಮಿಸುತ್ತಾರೆ. ಇಂದು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಮಾತುಕತೆ ಆಗಿ, ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಸೂಕ್ತವಾದ ಸ್ಥಾನಮಾನ ನೀಡಲಿದೆ ಎಂದಿದ್ದಾರೆ.
ಪುತ್ತಿಲ ಪರಿವಾರ ಹಾಗೂ ಮೋದಿ ಪರಿವಾರ ಒಟ್ಟಿಗೆ ಕೆಲಸ ಕಾರ್ಯ ಮಾಡಲಿದೆ ಎಂದಿರುವ ಪುತ್ತಿಲ ಅವರು, ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸುತ್ತೇವೆ. ದಕ್ಷಿಣ ಕನ್ನಡ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.