ದೇವನಹಳ್ಳಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ನಿಭಾಯಿಸಲು ಸಾಧ್ಯವಾಗದೆ ಆರ್ಥಿಕವಾಗಿ ದಿವಾಳಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ದಿಢೀರನೇ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ,
ಇದರಿಂದ ರಾಜ್ಯದಲ್ಲಿ ಏಕಾಏಕಿ 1 ಲೀಟರ್ ಪೆಟ್ರೋಲ್ ಬೆಲೆಯನ್ನು 3 ರೂಪಾಯಿ ಮತ್ತು ಡೀಸೆಲ್ ದರವನ್ನು 3 ರೂಪಾಯಿ 50 ಪೈಸೆ ಹೆಚ್ಚಳವಾಗಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸತ್ ಸದಸ್ಯ ಕೆ. ಸುಧಾಕರ್ ಆರೋಪಿಸಿದರು.ಅವರು ಜಿಲ್ಲಾಡಳಿತ ಭವನದ ಬಳಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿಯನ್ನು ಕುರಿತು ಮಾತನಾಡಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನರ ಸಂಚಾರ ಹಾಗೂ ಸರಕು ಸಾಗಣೆ ವೆಚ್ಚ ಜಾಸ್ತಿಯಾಗಿ ಎಲ್ಲಾ ಸೇವೆಗಳ ಮತ್ತು ದಿನನಿತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿವೆ, ಜನರು ದಿನ ನಿತ್ಯ ಖರೀದಿಸುವ ತರಕಾರಿ, ಔಷಧಿ, ದಿನಸಿ ವಸ್ತುಗಳು ಸೇರಿದಂತೆ ಎಲ್ಲಾ ಬೆಲೆ ಗಗನಕ್ಕೇರುತ್ತವೆ. ಇದರಿಂದ ಸಹಜವಾಗಿಯೇ ಬಡವರ ಮತ್ತು ಜನಸಾಮಾನ್ಯರ ತಿಂಗಳ ವೆಚ್ಚ ಹೆಚ್ಚುತ್ತದೆ,
ಜನರು ಜೀವನ ಸಾಗಿಸುವುದು ಕಷ್ಟಕರವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ಹಾಲು, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ವಿದ್ಯುತ್ ದರ ಹೆಚ್ಚಿಸಿದ್ದು, ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಈ ಮೂಲಕ ರಾಜ್ಯದ ಜನರ ತಲೆ ಮೇಲೆ ಕಲ್ಲು ಚಪ್ಪಡಿ ಹಾಕಿ, ಜೀವ ಹಿಂಡುತ್ತಿದೆ ಎಂದು ಆರೋಪಿಸಿದರು.
2021ರ ನವೆಂಬರ್ ತಿಂಗಳಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ ದಾಟಿದ್ದರಿಂದ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 35ರಿಂದ ಶೇಕಡ 25.92ಕ್ಕಿ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.24ರಿಂದ ಶೇ.14.34ಕ್ಕೆ ಇಳಿಸಿ, ಕೋವಿಡ್ ಹೊಡೆತಕ್ಕೆ ತತ್ತರಿಸಿದ ರಾಜ್ಯದ ಜನತೆಗೆ ನೆರವಾಗಿತ್ತು, ಅದೇ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾರಾಟ ತೆರಿಗೆಯನ್ನು ಕಡಿಮೆ ಮಾಡಿ, ಕಡಿಮೆ ದರದಲ್ಲಿ ತೈಲ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಎನ್. ನಾಗರಾಜ್(ಎಂ.ಟಿ.ಬಿ) ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ತೀರ್ಪಿನಿಂದ ಸೋತು, ಸೇಡನ್ನು ತೀರಿಸಿಕೊಳ್ಳಲು ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಿಕ್ಷೆ ನೀಡುತ್ತಿದೆ, ಇಂತಹ ಸೇಡಿನ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ತನ್ನ ಬೆಲೆ ಏರಿಕೆಯ ನೀತಿಯನ್ನು ಹಿಂಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಈಗ ಹೆಚ್ಚಿಸಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ, ದರ ಏರಿಕೆ ಕ್ರಮವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಹಿಂದಿನ ಹಂಗಾಮಿನಲ್ಲಿ ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟಿದ್ದಾರೆ. ತಕ್ಷಣವೇ ಹಿಂದಿನ ಬಿಜೆಪಿ ಸರ್ಕಾರ ಜಾರಿ ತಂದಿದ್ದ ಕೃಷಿ ಚಟುವಟಿಕೆಗಳಿಗಾಗಿ ರೈತರು ಖರೀದಿಸಿದ ಡೀಸೆಲ್ ವೆಚ್ಚವನ್ನು ಅವರ ಖಾತೆಗಳಿಗೆ ಜಮಾ ಮಾಡುವ ರೈತಶಕ್ತಿ ಯೋಜನೆಯನ್ನು ಮರು ಜಾರಿಗೊಳಿಸಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ಪ್ರತಿಭಟನಾ ನಿರತ ಮುಖಂಡರು ಜಿಲ್ಲಾಧಿಕಾರಿ ಡಾ|| ಎನ್.ಶಿವಶಂಕರ್ರವರಿಗೆ ಮನವಿ ಪತ್ರ ನೀಡಿದರು, ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮಾತನಾಡಿ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.ಈ ಸಮಯದಲ್ಲಿ ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಪರಿಷತ್ ಸದಸ್ಯ ಟಂ.ಟಿ.ಬಿ. ನಾಗರಾಜ್, ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ, ನೆಲಮಂಗಲ ನಾಗರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಪ್ರ.ಕಾರ್ಯದರ್ಶಿ ಹೆಚ್.ಎಂ.ರವಿಕುಮಾರ್, ತಾಲೂಕು ಅಧ್ಯಕ್ಷ ಸುಂದರೇಶ್, ಪ್ರ.ಕಾರ್ಯದರ್ಶಿ ನೀಲೇರಿ ಮಂಜುನಾಥ್, ಬಿಜೆಪಿ ಮುಖಂಡರಾದ ಸುರೇಶ್ ಆಚಾರ್, ಪುನೀತಾ, ನಾಗವೇಣಿ, ರಾಜಣ್ಣ, ರವಿಕುಮಾರ್, ನಾರಾಯಣಸ್ವಾಮಿ, ಸುರೇಶ್, ಸೇರಿದಂತೆ ಜಿಲ್ಲಾ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.