ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ಸರಣಿ ಆಡಲು ಆಸ್ಟ್ರೇಲಿಯಾಗೆ ತಲುಪಿದ್ದಾರೆ. ಆದರೆ ಅದಾಗಲೇ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಹಲವು ಊಹಾ ಪೋಹಗಳು ಹಬ್ಬಲು ಶುರುವಾಗಿವೆ. ಈ ಬಗ್ಗೆ ಅವರು ಇದೀಗ ಮಾಡಿರುವ ಎಕ್ಸ್ (ಘಿ) ಪೋಸ್ಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ಬಗ್ಗೆ
ಟೀಕೆ ಮಾಡುತ್ತಿರುವವರಿಗೆ ಅವರು ನೀಡಿರುವ ಒಂದೇ ಒಂದು ವಾಕ್ಯದ ಟ್ವೀಟ್ ಸಮರ್ಥ ತಿರುಗೇಟು ಎಂದೇ ಬಣ್ಣಿಸಲಾಗಿದೆ. ಸಾಮಾನ್ಯವಾಗಿ ಕೊಹ್ಲಿ ಅವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಿಲ್ಲ. ಹೀಗಾಗಿ, ಅವರ ಈ ಸಂದೇಶ
ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ“The only time you truly fail,is when you deside to give up” (ನೀವು ಬಿಟ್ಟುಕೊಡಲು ನಿರ್ಧರಿಸಿದಾಗ ಮಾತ್ರ ನಿಜವಾಗಿಯೂ ಸೋತಿದ್ದೀರಿ ಎಂದರ್ಥ) ಎಂದು ಬರೆದಿದ್ದಾರೆ.
ಅಕ್ಟೋಬರ್ ೧೬ ರಂದು ಬೆಳಗ್ಗೆ ಪರ್ತಗೆ ತಲುಪಿದ ತಕ್ಷಣವೇ ಈ ಟ್ವೀಟ್ ಮಾಡಿರುವುದರಿಂದ ೨೦೨೭ರ ವಿಶ್ವಕಪ್ಗೂ ಮುನ್ನ ಅವರ ಏಕದಿನ ವೃತ್ತಿಜೀವನದ
ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಸರಣಿಯಲ್ಲಿ ಅವರ ಪ್ರದರ್ಶನ ಅವರ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ ಆಗಬಹುದು ಎಂದು ಅಭಿಮಾನಿಗಳು
ಊಹಿಸುತ್ತಿದ್ದಾರೆ. ಸೋಲು ಕಲಿಸುವ ಪಾಠ!: ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು “Failure teaches you what victory never will”(ಗೆಲುವು ಕಲಿಸದ ಅನೇಕ ಸಂಗತಿಗಳನ್ನು ನಿಮಗೆ ಸೋಲು ಕಲಿಸಬಲ್ಲುದು) ಎಂಬ ಒಕ್ಕಣೆಯಿರುವ ವಿಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ. ಇವೆಲ್ಲವೂ ಅವರು ತಮ್ಮ ಕ್ರಿಕೆಟ್ ಭವಿಷ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದರ ಸೂಚನೆಯಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದ ೭ ತಿಂಗಳ ಬಳಿಕ ಭಾರತ ತಂಡ ಏಕದಿನ ಪಂದ್ಯವನ್ನು ಆಡುತ್ತಿದ್ದು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ
ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಅವರು ಅಕ್ಟೋಬರ್ ೧೯ರಿಂದ ಪ್ರಾರಂಭ ಆಗುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ
ಸರಣಿಯನ್ನು ಆಡಲಿದ್ದಾರೆ. ಈ ಸರಣಿಯಲ್ಲಿ ಅವರಿಬ್ಬರ ಪ್ರದರ್ಶನ ಮತ್ತು ಫಿಟ್ನೆಸ್ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಟ್ಟಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ , ಪ್ರಧಾನ ಕೋಚ್ ಗೌತಮ್ ಗಂಬೀರ್ ಮತ್ತು ನಾಯಕ ಶುಭಮನ್ ಗಿಲ್ ಹೀಗೆ ಒಬ್ಬೊಬ್ಬರೂ ಒಂದೊಂದು ಹೇಳಿಕೆ
ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.