ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಇಂದು ಅಫರ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವುದು ಅನುಮಾನವಾಗಿದೆ.
ವಿರಾಟ್ ಕೊಹ್ಲಿ ಕಳೆದ ಮೂರೂ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಕ್ರಮವಾಗಿ 1, 4 ಮತ್ತು ಶೂನ್ಯ ರನ್ ಗಳಿಸಿದ್ದರು. ಇದರಿಂದಾಗಿ ಅವರು ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಅಲ್ಲದೆ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲು ಒತ್ತಾಯ ಕೇಳಿಬರುತ್ತಿದೆ.
ಇದರಿಂದಾಗಿ ಈಗ ಕೊಹ್ಲಿ ಕೂಡಾ ಒತ್ತಡಕ್ಕೊಳಗಾಗಿದ್ದಾರೆ.
ಹೀಗಾಗಿ ಅವರು ಮೊನ್ನೆಯಿಂದ ನೆಟ್ಸ್ ನಲ್ಲಿ ಕೊಂಚ ಹೆಚ್ಚೇ ಬೆವರಿಳಿಸುತ್ತಿದ್ದರು. ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಟೀಂ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ. ಆದರೆ ಟಿ20 ವಿಶ್ವಕಪ್ ಗೆ ದಿಡೀರ್ ಆಗಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ ಯೋಜನೆ ಫಲಗೂಡಲಿಲ್ಲ.
ಇದರಿಂದಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇಂದು ರೋಹಿತ್ ಜೊತೆಗೆ ಕೊಹ್ಲಿ ಬದಲು ರಿಷಬ್ ಪಂತ್ ರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಹಾಗಿದ್ದಲ್ಲಿ ಕೊಹ್ಲಿ ಎಂದಿನಂತೆ ತಮ್ಮ ಮೆಚ್ಚಿನ ಮೂರನೇ ಕ್ರಮಾಂಕದಲ್ಲಿ ಆಡಬಹುದಾಗಿದೆ. ಆದರೆ ಆಡುವ ಬಳಗದಲ್ಲಿ ಇಂದು ಬೇರೆ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.