ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಚೆಗೆ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ ಅವರ ಮತ್ತೊಂದು ಕನಸೂ ಈಗ ನನಸಾಗಿದೆ.
ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ನಡೆದ ‘ಆರ್ಸಿಬಿ ಅನ್ಬಾಕ್ಸ್’ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಮಹಿಳಾ ತಂಡವನ್ನೂ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೇಯಾಂಕ ಅವರಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿಯಿತು. ಇದೇ ಸಂದರ್ಭದಲ್ಲಿ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡುವ ಅವಕಾಶ ಶ್ರೇಯಾಂಕಗೆ ಲಭಿಸಿತು.
‘ನಾನು ಕ್ರಿಕೆಟ್ ನೋಡಲು ಆರಂಭಿಸಿದ್ದೇ ವಿರಾಟ್ ಕೊಹ್ಲಿ ಅವರಿಂದಾಗಿ. ಅವರಂತೇ ಆಗುವ ಕನಸು ಕಾಣುತ್ತ ಬೆಳೆದೆ. ಕಳೆದ ಸಂಜೆ ಅವರನ್ನು ಭೇಟಿಯಾಗಿದ್ದು ಜನ್ನ ಜೀವನದ ಅವಿಸ್ಮರಣೀಯ ಕ್ಷಣ’ ಎಂದು 21 ವರ್ಷದ ಶ್ರೇಯಾಂಕಾ ‘ಎಕ್ಸ್’ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.‘ಹಾಯ್ ಶ್ರೇಯಾಂಕ, ವೆಲ್ ಬೌಲ್ಡ್ ಎಂದು ವಿರಾಟ್ ನನ್ನನ್ನು ಕೇಳಿದರು. ಅವರಿಗೆ ನನ್ನ ಹೆಸರು ಗೊತ್ತು’ ಎಂದು ಆಫ್ಸ್ಪಿನ್ನರ್ ಶ್ರೇಯಾಂಕ ಸಂತಸ ವ್ಯಕ್ತಪಡಿಸಿದ್ದಾರೆ.
ಡಬ್ಲ್ಯುಪಿಎಲ್ ಫೈನಲ್ನಲ್ಲಿ ಅವರು ತಮ್ಮ ಮುಂಗೈ ಮೂಳೆ ಮುರಿತದ ನೋವು ಸಹಿಸಿಕೊಂಡು ಆಡಿದ್ದರು. ಟೂರ್ನಿಯಲ್ಲಿ ಅವರು ಒಟ್ಟು 13 ವಿಕೆಟ್ಗಳನ್ನು ಗಳಿಸಿ ಮಿಂಚಿದರು. ಹೋದ ಸೆಪ್ಟೆಂಬರ್ನಲ್ಲಿ ಶ್ರೇಯಾಂಕ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಗಯಾನ ಅಮೇಜ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅದರಲ್ಲಿ 9 ವಿಕೆಟ್ ಗಳಿಸಿದ್ದರು.