ಮಂಗಳೂರು: ನನ್ನ ತಮ್ಮನಿಗೆ ಚುನಾವಣೆ ಯಲ್ಲಿ ಆಸಕ್ತಿ ಇಲ್ಲ. ಜನ ನಮಗೆ ವಿಶ್ರಾಂತಿ ನೀಡಲು ಹೇಳಿದ್ದಾರೆ. ಆದರೆ, ಪಕ್ಷದ ಕೆಲಸ ಮಾಡಬೇಕೆಂಬ ಆಸೆ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರಿಗೆ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಧಿಗಳ ಬಳಿ ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ನಮಗೆ 85 ಸಾವಿರ ಜನ ಮತ ಕೊಟ್ಟಿದ್ದಾರೆ. ಎಂದಿಗೂ ಆ ಜನರನ್ನು ಬಿಡಲಾಗದು. ದೇವರು ನಮಗೆ ಈಗ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆ ಇದೆ. ನಾವು ಒಂದಷ್ಟು ಅಳಿಲು ಸೇವೆ ಮಾಡಬೇಕೆಂದು ಇದ್ದೇವೆ. ನಾವು ಅಧಿಕಾರ ಇದ್ದಾಗ ಮಾಡಿದ್ದೇವೆ. ಇದೀಗ ಸರಿಯಾದ ಸಮಯ.
ಏನೋ ಒಂದು ಸಹಾಯ ಮಾಡಬೇಕೆಂದು ಇದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ನೋಡುವ ಮೊದಲು ನಾನು ನೋಡಿದ್ದೇನೆ. ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು. ನಾನು 1985ರಲ್ಲೇ ವಿಧಾನಸಭಾ ಚುನಾವಣೆಗೆ ನಿಂತೆ. ಅವರು 1995 ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು ಎಂದು ಅವರು ಹೇಳಿದರು.
ಹೆಚ್ಚಿನ ಡಿಸಿಎಂ ಸ್ಥಾನಗಳಿಗೆ ಬೇಡಿಕೆ ಸೃಷ್ಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ನೀವು ಪ್ರತಿ ದಿನ ಸುದ್ದಿ ಪ್ರಕಟ ಮಾಡುತ್ತಿದ್ದೀರಲ್ಲ, ಇದರಿಂದ ಖುಷಿಯಾಗುವವರಿಗೆ ಆಗಲಿ. ಯಾರು ಏನು ಬೇಕಿದ್ದರೂ ಬೇಡಿಕೆ ಇಡಲಿ. ಪಕ್ಷ ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ ಎಂದರು.ಕುಮಾರಸ್ವಾಮಿ ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿಗೆ ಎಷ್ಟು ಜ್ಞಾನ ಇದೆ ಅಥವಾ ಇಲ್ಲವಾ ಗೊತ್ತಿಲ್ಲ. ನನಗಂತು ಏನೂ ಗೊತ್ತಿಲ್ಲ ಎಂದರು.
ಏತನ್ಮಧ್ಯೆ, ಕುಕ್ಕೆ ಭೇಟಿ ಬಗ್ಗೆ ಮಾತನಾಡಿದ ಅವರು, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳನ್ನು ಜತೆಯಾಗಿ ತೆಗೆದುಕೊಂಡು ಹೋಗಲು ಧಾರ್ಮಿಕ ದತ್ತಿ ಇಲಾಖೆಯನ್ನು ಇಟ್ಟುಕೊಂಡಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರವರು ಪ್ರಾರ್ಥನೆ ಮಾಡುತ್ತಾರೆ. ಬಹಳ ದಿನಗಳಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಬೇಕೆಂಬ ಆಸೆ ಇತ್ತು. ಇವತ್ತು ಕುಟುಂಬ ಸಮೇತ ಹೋಗುತ್ತಿದ್ದೇನೆ ಎಂದರು.