ಬೆಂಗಳೂರು: ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಅವೇರ್ನೆಸ್ ಜಾಗೃತಿ ಅಭಿಯಾನವನ್ನು ಕೈಗೊಂಡಿರುವ ಬಿಬಿಎಂಪಿ ವತಿಯಿಂದ ಮಲ್ಲೇಶ್ವರಂ -157 ಎ ಸಿ ಪಶ್ಚಿಮ ವಲಯದಲ್ಲಿ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿರವರ ಉಸ್ತುವಾರಿಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಳೆದ ಮೂರ್ನಾಲ್ಕು ವಾರಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು,
ಬುಧವಾರದಂದು ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯರು ಸಹ ಈ ಜಾಗೃತಿ ಅಭಿಯಾನದಲ್ಲಿ ಸಕ್ರಿಯರಾಗಿ ಭಾಗವಹಿಸಿ, ಸಾರ್ವಜನಿಕರಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರ್ಗೋಸ ರಸ್ತೆ, ಸಂಪಿಗೆ ರಸ್ತೆ, ಹಾಗೂ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಹಾಗೂ ಅಲ್ಲಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಕಡ್ಡಾಯವಾಗಿ ಮತದಾನವನ್ನು ಮಾಡುವ ಮೂಲಕ ಎಲ್ಲಾ ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಲೇಬೇಕೆಂಬ ಸಂದೇಶವನ್ನು ನೀಡಿದರು. ಮಲ್ಲೇಶ್ವರಂ 18 ನೇ ಕ್ರಾಸ್ ಬಸ್ ಸ್ಟಾಂಡ್ ನಲ್ಲಿ ಹಾಗೂ ಬಿ ಡಬ್ಲ್ಯೂ ಎಸ್ ಎಸ್ ಬಿ ಯ ಸುವರ್ಣ ಭವನದ ಆವರಣದಲ್ಲಿ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಉಪ ಆಯುಕ್ತರಾದ ಮಂಜುನಾಥ ಸ್ವಾಮಿರವರು ಈ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಪಾವಿತ್ರ್ಯತೆ ಕಾಯ್ದುಕೊಳ್ಳುವ ಕುರಿತು ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಜಾಥಾ ಕಾರ್ಯಕ್ರಮದಲ್ಲಿಕಾಲೇಜಿನ ಅಧ್ಯಾಪಕರುಗಳು, ಇ ಎಲ್ ಸಿ ಕ್ಲಬ್ ಸದಸ್ಯರುಗಳು, ಪಶ್ಚಿಮ ವಲಯದ ಕಂದಾಯ ಇಲಾಖೆಯ ಆರ್ ಓ, ಎ ಆರ್ ಓ, ಆರ್ ಐ ಮುಂತಾದವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.