ದಾವಣಗೆರೆ: 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಏಪ್ರಿಲ್ 9 ರಂದು ಜರುಗಲಿದ್ದು, ಮತದಾರರು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.ಅವರು ಇಂದು (ಏ.05) ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯ ವತಿಯಿಂದ ದೇವರಾಜ ಅರಸು ಬಡಾವಣೆಯ ಕ್ರೀಡಾಂಗಣದಲ್ಲಿ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯನ್ನು ಉದ್ಪಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನವೇ ಅಡಿಪಾಯ, ಎಪ್ರಿಲ್ 9 ರಂದು ನಡೆಯುವ ಉಪ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು, ಮನೆಯಲ್ಲಿರುವ ಪೋಷಕರು, ಅಜ್ಜ-ಅಜ್ಜಿಯರನ್ನು ಸಮಯಕ್ಕೆ ಸರಿಯಾಗಿ ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸುವಂತೆ ಮಕ್ಕಳಿಗೆ ಕರೆ ನೀಡಿದರು. ಮತದಾನದ ದಿನವನ್ನು ಕೇವಲ ರಜಾ ದಿನವೆಂದು ಪರಿಗಣಿಸದೆ, ಅದೊಂದು ಸಾಂಸ್ಕೃತಿಕ ಹಬ್ಬದಂತೆ ಸಂಭ್ರಮದಿAದ ಆಚರಿಸಿ, ರಾಷ್ಟ್ರದ ಭವಿಷ್ಯ ರೂಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮತದಾನವು ನಮ್ಮ ಸಂವಿಧಾನಬದ್ಧ ಹಕ್ಕಾಗಿದ್ದು, ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆಯಾಗಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು ಮಾತನಾಡಿ ಪ್ರಜಾಪ್ರಭುತ್ವದ ಅಡಿಪಾಯವಾದ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ವಿಶೇಷ ‘ಸ್ವೀಪ್’ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯು ಬರುವ ಏಪ್ರಿಲ್ 9 ರಂದು ನಡೆಯಲಿದ್ದು, ಅಂದು ಬೆಳಿಗ್ಗೆಯಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಬೇಕು, ಚುನಾವಣಾ ಆಯೋಗದ ನಿರ್ದೇಶನದಂತೆ, ಈ ಬಾರಿ ಅಂಗವಿಕಲ ಚೇತನರು, ಹಿರಿಯ ನಾಗರಿಕರು ಹಾಗೂ ತೃತೀಯ ಲಿಂಗಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಲು ಪೂರಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.ಫೈನ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳು ಬಿಡಿಸಿದ ರಂಗೋಲಿಯು “107- ದಾವಣಗೆರೆ ಉಪಚುನಾವಣೆ – 9 ಏಪ್ರಿಲ್, 2026, ಜಿಲ್ಲಾ ಸ್ವೀಪ್ ಸಮಿತಿ ದಾವಣಗೆರೆ” ಎಂಬ ಸಂದೇಶದೊಂದಿಗೆ ಸಾರ್ವಜನಿಕರ ಗಮನ ಸೆಳೆಯಿತು., ಜಿಲ್ಲಾ ಕ್ರೀಡಾಂಗಣದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಐಕ್ಯತೆ ಪ್ರದರ್ಶಿಸಿದರು. ಜಿಲ್ಲಾಧಿಕಾರಿಗಳು “ನಮ್ಮ ಮತ – ನಮ್ಮ ಹಕ್ಕು, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತದಾನ ಮಾಡಿ” ನಾನು ಎಲ್ಲರಿಗೂ ಮತಹಾಕಲು ಪ್ರೇರಿಪಿಸುತ್ತೇವೆ, ಮತಗಟ್ಟೆಗೆ ಹೋಗುವೆ ಮತ ಚಲಾಯಿಸುತ್ತೇವೆ ಎಂಬ ಘೋಷವಾಕ್ಯವನ್ನು ಎಲ್ಲರಿಗೂ ಬೋಧಿಸಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್, ಪಿಡಿ ರೇಷ್ಮಾಭಾನು, ಸಿಪಿಒ ಮಲ್ಲಾನಾಯಕ್, ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಡಾ.ಸಮೃದ್ಧಿ ವಿಠ್ಠಲರಾವ್ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.



