ಬೆಂಗಳೂರು: ಠಾಣಾ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದಕ್ಕೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ರವರು ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.ತಮ್ಮ ಮಾಸಿಕ ಕವಾಯಿತು ಪೆರೇಡ್ ನಲ್ಲಿ ಇಂದು ಮಾತನಾಡಿದ ಅವರು, ನಗರ ಪೊಲೀಸ್ ಡಿಸಿಪಿ ಮಟ್ಟದ ಅಧಿಕಾರಿಗಳುಪೊಲೀಸ್ ಠಾಣಾಗೆ ಸರಿಯಾಗಿ ಭೇಟಿ ನೀಡದ ಪರಿಣಾಮವಾಗಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಥಣಿಸಂದ್ರದ ಸಿಎಆರ್ ಉತ್ತರ ವಿಭಾಗದಲ್ಲಿ ನಡೆದ ಕವಾಯಿತು ವಂದನೆ ಸ್ವೀಕರಿಸಿ ಮಾತನಾಡಿದ ದಯಾನಂದ್ ರವರು ಸಿವಿಲ್ ವ್ಯಾಜ್ಯ, ರೌಡಿಗಳೊಂದಿಗೆ ಹಾಗೂ ಆರೋಪಿಗಳೊಂದಿಗೆ ಶಾಮೀಲು, ಹಣವಂತರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದುರ್ಬಲರಿಗೆ, ದೀನದಲಿತರಿಗೆ ಠಾಣಾಮಟ್ಟದಲ್ಲಿ ರಕ್ಷಣೆ ಸಿಗುತ್ತಿಲ್ಲವೆಂದ ಅವರು, ಕೇವಲ ಬಲಿಷ್ಠರು, ಹಣವಂತರಿಗೆ ಮಾತ್ರಪೊಲೀಸ್ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಬಹಳ ಕೆಟ್ಟ ಹೆಸರು ಬರುತ್ತಿದೆ ಎಂದು ನೋವಿನಿಂದ ನುಡಿದರು.
ಈ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಪೊಲೀಸ್ ಠಾಣೆಗಳು ನ್ಯಾಯ ದೇಗುಲಗಳಿದ್ದಂತೆ ಆದರೆ ಅಲ್ಲಿಯೇ ನ್ಯಾಯ ಸಿಗುತ್ತಿಲ್ಲವೆಂದರೆ ಸಾರ್ವಜನಿಕರು ಮುಂದೆಲ್ಲಿ ಹೋಗಬೇಕು ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದಿದ್ದಾರೆ.
ಮನೆಕನ್ನಗಳವು ಪ್ರಕರಣಗಳು ಹಾಗೂ ವಾಹನ ಕಳವು ಪ್ರಕರಣಗಳು ಜಾಸ್ತಿ ನಡೆಯುತ್ತಿರುವುದು ಬಹಳ ಬೇಸರ ತಂದಿದೆ, ಪತ್ತೆ ಕಾರ್ಯ ಕಡಿಮೆಯಾಗಿದೆ ಎಂದರು.ಹಾಗೂ ಇದೇ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ 113 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ ನಗದನ್ನು ಸಹ ನೀಡಲಾಯಿತು.ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ರವರ ನೇತೃತ್ವದಲ್ಲಿ ನಡೆದ ಕವಾಯಿತಿಗೆ ಪ್ರಶಂಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ.