ಮಾಗಡಿ: ಈ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಬಡವರ ಪರ ಕೆಲಸ ಮಾಡಲಿಲ್ಲ.ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು ಗುಡಿಸಲು ಮುಕ್ತ ರಾಜ್ಯವನ್ನಾಗಿಸಲು ನಾವು ಬದ್ದರಾಗಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಸಾತನೂರು ಗ್ರಾಪಂ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಮತ್ತು ನಾವು ವಸತಿ ಸಚಿವರಾದ ಜûಮೀರ್ ಅಹಮ್ಮದ್ ಬಳಿಯಲ್ಲಿ ವಿನಂತಿಸಿ 1500 ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು ಕ್ಷೇತ್ರ ವ್ಯಾಪ್ತಿಯ ಮನೆಯಿಲ್ಲದ ಕಡುಬಡವರಿಗೆ ಮನೆಗಳನ್ನು ಪ್ರತಿ ಗ್ರಾಪಂ ವ್ಯಾಪ್ತಿಯ 50 ಮಂದಿಗೆ ನೀಡಲಿದ್ದೇವೆ.
ಪಕ್ಷಾತೀತವಾಗಿ ನೀಡಲಿದ್ದು ಯಾರು ನಿರ್ಗತಿಕರು ಅವರಿಗೆ ಪ್ರಾಮಾಣಿಕವಾಗಿ ನೀಡಲಾಗುವುದು.ಮತ್ತೆ 1500 ಹೆಚ್ಚುವರಿ ಮನೆಗಳನ್ನು ನೀಡಲು ವಸತಿ ಸಚಿವರ ಬಳಿಯಲ್ಲಿ ಮಂಜೂರು ಮಾಡಿಸಲಾಗುವುದು ಎಂದು ಸುರೇಶ್ ತಿಳಿಸಿದರು.ನಾವು ಈಗಾಗಲೇ ತಾಲ್ಲೂಕು ದಂಡಾಧಿಕಾರಿಗಳಿಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 10 ಎಕರೆ ಸರಕಾರಿ ಗೋಮಾಳದ ಭೂಮಿಯನ್ನು ಗುರುತಿಸಲು ಸೂಚಿಸಿದ್ದು ಈ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಗ್ರಾಪಂಗೆ ಎಲ್ಲಾ ಸರ್ವಾಧಿಕಾರ ನೀಡಿದ್ದು ಪಂಚಾಯತಿ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನಸ್ನೇಹಿ ಕೆಲಸ ಮಾಡಿದರೆ ಗ್ರಾಮಾಭಿವೃದ್ದಿಯಾಗುತ್ತದೆ.ಹಳ್ಳಿಗಳು ಅಭಿವೃದ್ಧಿಯಾದರೆ ದೇಶಾಭಿವೃದ್ದಿಯಾಗುತ್ತದೆ.ಈ ಅಜೆಂಡಾ ಅಡಿಯಲ್ಲಿ ಗ್ರಾಪಂ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸುರೇಶ್ ಸ್ಪಷ್ಟಪಡಿಸಿದರು.
ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಮಾತನಾಡಿ ಈ ಹಿಂದೆ ಈ ದೇಶದ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ದೇಶದ ಅಭಿವೃದ್ಧಿ ದೃಷ್ಟಿಯಿಂದ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದ ಪರಿಣಾಮವಾಗಿ ದೇಶದ ಮೂಲೆ ಮೂಲೆಯ ಕಟ್ಟಕಡೆಯ ಹಳ್ಳಿಗಳು ಅಭಿವೃದ್ಧಿಯಾಗಲು ಸಹಕಾರಿಯಾಯಿತು.ಈಗ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷವು ಅನುಷ್ಠಾನಕ್ಕೆ ತರುವ ಮೂಲಕ ಸಾಮಾನ್ಯ ಜನರಿಗೆ ಧ್ವನಿಯಾಗುತ್ತಿದ್ದೇವೆ.
ನಾವು ದೇವಾಲಯವನ್ನು ಕಟ್ಟಿ ಭಾವನಾತ್ಮಕದ ಅಡಿಯಲ್ಲಿ ರಾಜಕಾರಣ ಮಾಡುತ್ತಿಲ್ಲ.ನಮ್ಮ ದ್ಯೇಯೋದ್ದೇಶ ಬಡವರ ದ್ವನಿಯಾಗಿದೆ ಎಂದ ಅವರು ನಾವು ಭರವಸೆಗಳಿಗೆ ಹಣ ವಿನಿಯೋಗಿಸಿದರೆ ಆರ್ಥಿಕ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬಿಜೆಪಿಗರು ಹೇಳುತ್ತಾರೆ.ಅದೇ ಬಿಜೆಪಿಯವರು ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ ದೇಶ ಉದ್ದಾರವಾಗುತ್ತದೆಯೇಎಂದು ಬಾಲಕೃಷ್ಣ ಹರಿಹಾಯ್ದರು.
ಮನವಿ:ಗ್ರಾಪಂ ಮಾಜಿ ಅದ್ಯಕ್ಷ ಗಿರಿಯಪ್ಪ ಸಾತನೂರಿನಲ್ಲಿ ಒಂದು ಎಕರೆ ಸರಕಾರಿ ಜಾಗವಿದ್ದು ಇಲ್ಲಿ ಸಮುದಾಯ ಭವನ,ಮತ್ತು ಪಶು ಆಸ್ಪತ್ರೆ ನಿರ್ಮಿಸಲು ಮನವಿ ಸಲ್ಲಿಸಿದರು.ತಾಪಂ ಇಒ ಚಂದ್ರು,ಉಪ ತಹಶೀಲ್ದಾರ್ ಶರತ್ ಕುಮಾರ್, ಸಾತನೂರು ಗ್ರಾಪಂ ಅದ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷೆ ಮಂಗಳಮ್ಮ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಿಜಯಣ್ಣ, ಹೆಚ್.ಎಂ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯೆ ಸುಮಾರಮೇಶ್, ಗ್ರಾಪಂ ಸದಸ್ಯರಾದ ಮಂಜುನಾಥ್, ನಂದೀಶ್,ಶಿವಲಿಂಗಯ್ಯ, ಗಂಗಮ್ಮ, ಹೊನ್ನಮ್ಮ, ಜಯಮ್ಮ, ಮಹದೇವಯ್ಯ, ಗಂಗಮ್ಮ, ಭದ್ರಕಾಳಮ್ಮ, ಮುಖಂಡರಾದ ಬಸಂತಿ, ದೋಣಕುಪ್ಪೆ ರಾಮಣ್ಣ, ಪಿಡಿಒ ಪ್ರಭು ಮಹಾಲಿಂಗಯ್ಯ, ಕಾರ್ಯದರ್ಶಿ ಎಂ.ಜಿ.ಮಂಜುಳಾ ಸೇರಿದಂತೆ ಮತ್ತಿತರಿದ್ದರು.