ನವದೆಹಲಿ: ಮಾರ್ಚ್ನಲ್ಲಿ ನಡೆಯುವ ರಾಷ್ಟ್ರೀಯ ಕುಸ್ತಿ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳುವಂತೆ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್ ಮತ್ತು ನಿವೃತ್ತಿ ಘೋಷಿಸಿರುವ ಸಾಕ್ಷಿ ಮಲಿಕ್ ಅವರಿಗೆ ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್ಐ) ಸೋಮವಾರ ಆಹ್ವಾನ ನೀಡಿದೆ.
ಏ.11ರಿಂದ 16 ರವರೆಗೆ ಕಿರ್ಗಿಸ್ತಾನದಲ್ಲಿ ನಡೆಯುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಮತ್ತು ಏ.19 ರಿಂದ 21ರವರೆಗೆ ಅದೇ ಸ್ಥಳದಲ್ಲಿ ಏಷ್ಯನ್ ಒಲಿಂಪಿಕ್ ಗೇಮ್ಸ್ ಕ್ವಾಲಿಫೈಯರ್ ಟೂರ್ನಿಗೆ ತಂಡಗಳನ್ನು ಆಯ್ಕೆ ಮಾಡಲು ರಾಷ್ಟ್ರೀಯ ಟ್ರಯಲ್ಸ್ ನಡೆಸಲಾಗುತ್ತಿದೆ ಎಂದು ಡಬ್ಲ್ಯುಎಫ್ಐ ಹೇಳಿಕೆಯಲ್ಲಿ ತಿಳಿಸಿದೆ.
ನವದೆಹಲಿಯ ಕೆ.ಡಿ. ಜಾಧವ್ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ಮಾರ್ಚ್ 10 ಮತ್ತು 11ರಂದು ಟ್ರಯಲ್ಸ್ ನಡೆಯಲಿದೆ.ಡಬ್ಲ್ಯುಎಫ್ಐ ಮೇಲೆ ವಿಧಿಸಿದ್ದ ಅಮಾನತನ್ನು ಈ ತಿಂಗಳ ಆರಂಭದಲ್ಲಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ವಾಪಸ್ ಪಡೆದಿತ್ತು. ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಹೋರಾಟ ನಡೆಸಿದ್ದ ಕುಸ್ತಿಪಟುಗಳ ವಿರುದ್ಧ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂಬ ಷರತ್ತನ್ನು ಅದು ವಿಧಿಸಿತ್ತು.