ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಇದೇ 10 ಮತ್ತು 11ರಂದು ಆಯೋಜಿಸಿರುವ ರಾಷ್ಟ್ರೀಯ ತಂಡಕ್ಕಾಗಿ ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸುವುದಿಲ್ಲ ಎಂದು ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಹೇಳಿದ್ದಾರೆ. ಆಯ್ಕೆ ಪ್ರಕ್ರಿಯೆ ನಡೆಸದಂತೆ ದೆಹಲಿ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬಜರಂಗ್, ವಿನೇಶಾ ಫೋಗಾಟ್, ಸಾಕ್ಷಿ ಮಲಿಕ್ ಮತ್ತು ಸತ್ಯವ್ರತ್ ಕಡಿಯಾನ್ ಅವರು ಸೇರಿ ಜಂಟಿಯಾಗಿ ನ್ಯಾಯಾಯಲ್ಲಿ ಅರ್ಜಿ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ, ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಕುರಿತು ಬಜರಂಗ್ ಖಚಿತಪಡಿಸಿಲ್ಲ.ಕಿರ್ಗಿಸ್ತಾನದಲ್ಲಿ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ಒಲಿಂಪಿಕ್ ಕ್ವಾಲಿಫೈಯರ್ ನಲ್ಲಿ ಆಡುವ ತಂಡವನ್ನು ಡಬ್ಲ್ಯುಎಫ್ಐ ಅಯ್ಕೆ ಟ್ರಯಲ್ಸ್ ಮೂಲಕ ನಿರ್ಧರಿಸಲಾಗುವುದು. ಆದರೆ, ಸದ್ಯ ಬಜರಂಗ್ ಅವರು ರಷ್ಯಾದಲ್ಲಿದ್ದಾರೆ.
`ನಾನು ಟ್ರಯಲ್ಸ್ನಲ್ಲಿ ಭಾಗವಹಿಸದಿದ್ದರೆ ತರಬೇತಿಗಾಗಿ ವ್ಯಯಿಸಿದ ರೂ.30 ಲಕ್ಷ ವ್ಯರ್ಥವಾಗಬಹುದು. ಆದರೆ ಅಮಾನತು ಗೊಂಡಿರುವ ಡಬ್ಲ್ಯುಎಫ್ಐ ಟ್ರಯಲ್ಸ್ ಆಯೋಜಿಸುತ್ತಿರುವುದು ಯಾಕೆ?, ಸರ್ಕಾರ ಯಾಕೆ ಮೌನವಾಗಿದೆ?, ಅಡ್ಹಾಕ್ ಸಮಿತಿಯು ಟ್ರಯಲ್ಸ್ ಆಯೋಜನೆ ಮಾಡಿದ್ದರೆ ನಾವು ಸ್ಪರ್ಧಿಸುತ್ತಿದ್ದೆವು’ ಎಂದು ಬಜರಂಗ್ ಹೇಳಿದ್ದಾರೆ.