ಇದು ನಿಜಕ್ಕೂ ಕೂಡ ಅಚ್ಚರಿ ಆದ್ರೂ ಸತ್ಯ. ಸರ್ಕಾರಗಳು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರಬೇಕೇ ಹೊರತು, ಜನರಿಗೆ ಕಂಟಕವಾಗಿ ಸಂಕಷ್ಟವನ್ನು ತಂದು ಇಡಬಾರದು. ಈಗ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿರುವುದು ಇದೇ ಘನಂದಾರಿ ಕೆಲಸವನ್ನ. ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿ ಇನ್ನೇನು ತೃತೀಯ ಭಾಷೆ ಹಿಂದಿ ವಿಷಯವನ್ನು ವಿದ್ಯಾರ್ಥಿಗಳು ಬರೆಯಬೇಕು ಎನ್ನುವಷ್ಟರಲ್ಲಿ, ಏಕಾಏಕಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ತೃತೀಯ ಭಾಷೆಗೆ ಮನ್ನಣೆ ಇಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕ 625 ನ್ನು ಈ ಶೈಕ್ಷಣಿಕ ವರ್ಷವೇ ಇಲಾಖೆ ಇಳಿಕೆ ಮಾಡಿದ್ದು, 625 ರ ಬದಲಿಗೆ 525 ಅಂಕಗಳು ಮಾತ್ರ ವಿದ್ಯಾರ್ಥಿಗಳು ಬರೆಯತಕ್ಕದ್ದು. ತೃತೀಯ ಭಾಷೆ ಯಾವುದೇ ಇರಲೀ, ಅದಕ್ಕೆ ಅಂಕ ಪರಿಗಣಿಸುವುದಿಲ್ಲ. ಅದರ ಬದಲಿಗೆ ಗ್ರೇಡ್ ನೀಡುತ್ತೇವೆ ಎಂದು ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಗೊಂದಲ, ಪೋಷಕರಲ್ಲಿ ಆತಂಕ ಹಾಗೂ ಶಿಕ್ಷಕರಲ್ಲಿ ಟೆನ್ಷನ್ ತಂದಿಟ್ಟಿದೆ. ಅಷ್ಟಕ್ಕೂ ಏನಿದು ವಿಚಾರ? ಎಂಬುದನ್ನೇ ಕೂಲಂಕುಷವಾಗಿ ಹೇಳಲು ನಾವು ಮುಂದಾಗಿದ್ದೇವೆ. ಈ ವಿಷಯವನ್ನು ನೀವೆಲ್ಲಾ ಸರಿಯಾಗಿ ಅರ್ಥೈಸಿಕೊಳ್ಳಬೇಕು ಅಷ್ಟೇ. ಸಮಾಧಾನವಾಗಿ ಈ ವಿಶೇಷ ಲೇಖನ ಓದಿ, ನಿಮಗೆ ಅರ್ಥವಾಗುತ್ತದೆ… ಸರ್ಕಾರ ಮಾಡಿರುವುದು ಎಂತಹ ಕೆಟ್ಟ ನಿರ್ಧಾರವನ್ನ ಎಂಬುದು ಗೊತ್ತಾಗುತ್ತದೆ.
ನೆರೆಯ ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಇದೇ ಮಾದರಿಯನ್ನು ನಮ್ಮ ರಾಜ್ಯದಲ್ಲಿಯೂ ಅನುಷ್ಠಾನ ಮಾಡಬೇಕೆಂದು ಕೆಲ ಕನ್ನಡ ಪರ ಸಂಘಟನೆಗಳು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತರುತ್ತಿತ್ತು. ಇದನ್ನು ಯಾವಾಗ? ಹೇಗೆ? ಯಾವ ಕ್ರಮದಲ್ಲಿ? ಅನುಷ್ಠಾನ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆಲೋಚಿಸುತ್ತಿತ್ತು. ಈಗ ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಗಿದಿದ್ದೇ ತಡ, ಇದೇ ಸೂಕ್ತ ಸಂದರ್ಭ ಎನ್ನುತ್ತಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರ ತೃತೀಯ ಭಾಷೆಯ ಮೌಲ್ಯಾಂಕವನ್ನು ಕಡಿತಗೊಳಿಸಿದ್ದು, ಇದೇ ಶೈಕ್ಷಣಿಕ ವರ್ಷದಲ್ಲಿ ಅನ್ವಯವಾಗುವಂತೆ 625 ಅಂಕಗಳ ಬದಲಿಗೆ 525 ಅಂಕಗಳು ಮಾತ್ರ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದ್ದು, ತೃತೀಯ ಭಾಷೆಗೆ ಗ್ರೇಡ್ ನೀಡುವ ಕ್ರಮ ಅನುಷ್ಠಾನ ಮಾಡುತ್ತಿದ್ದೇವೆ ಎಂಬ ಆದೇಶ ಹೊರಡಿಸಿದ್ದಾರೆ. ಯಾವಾಗ ಈ ಆದೇಶ ಹೊರಗೆ ಬಿತ್ತೋ, ಅಲ್ಲಿಂದ ಆರಂಭವಾಗಿದೆ ನೋಡಿ, ಈ ವಿಚಾರದ ಬಗ್ಗೆ ಪರ – ವಿರೋಧದ ಚರ್ಚೆಗಳು. ತೃತೀಯ ಭಾಷೆಯ ಮೌಲ್ಯಾಂಕದ ಬದಲಿಗೆ ಗ್ರೇಡ್ ಎಂಬುದನ್ನು ಸಚಿವರು ತಿಳಿಸಿದ ಕೂಡಲೇ ಕನ್ನಡ ಪರ ಸಂಘಟನೆಗಳು ಹಾಗೂ ಅದರ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ರೆ, ಇತ್ತ ತೃತೀಯ ಭಾಷೆ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳು ಬೇಸರಕ್ಕೊಳಗಾಗಿದ್ದಾರೆ. ಇಷ್ಟು ದಿನ ಎಸ್ಎಸ್ಎಲ್ಸಿ ಪರೀಕ್ಷೆ ಅಂದರೆ 625 ಅಂಕಗಳಿಗೆ ವಿದ್ಯಾರ್ಥಿಗಳು ಬರವಣಿಗೆ ಬರೆಯಬೇಕಿತ್ತು. ಆದ್ರೆ ಈ ಶೈಕ್ಷಣಿಕ ವರ್ಷ ಅದನ್ನು 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ ಎಂಬ ಆದೇಶದಿಂದ ಅವರೆಲ್ಲಾ ಗೊಂದಲಕ್ಕೆ ಒಳಗಾಗಿದ್ದಾರೆ. ಇತ್ತ ವಿದ್ಯಾರ್ಥಿಗಳ ಗೊಂದಲದಿAದ ಪೋಷಕರು ಆತಂಕಕ್ಕೆ ಈಡಾಗಿದ್ರೆ, ಶಿಕ್ಷಕರು ಕೂಡ ವಿಚಿತ್ರ ಟೆನ್ಷನ್ಗೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಪ್ರತಿ ಶೈಕ್ಷಣಿಕ ವರ್ಷ ಆಂದಾಜು 8 ಲಕ್ಷಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಅದೇ ರೀತಿ ಈ ವರ್ಷವು ಕೂಡ 8 ಲಕ್ಷ 80 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮಾರ್ಚ್ 18 ರಿಂದ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಇಂದು ಅಂದರೆ ಮಾರ್ಚ್ 31 ರಂದು ತೃತೀಯ ಭಾಷೆ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯಬೇಕಿತ್ತು.ರಾಜ್ಯ ಸರ್ಕಾರ ತೃತೀಯ ಭಾಷೆ ಅಂದರೆ ಅದು ಕೇವಲ ಹಿಂದಿ ಎಂದುಕೊಂಡಿದೆ ಅನ್ನಿಸುತ್ತಿದೆ. ಸರ್ಕಾರಕ್ಕೆ ತೃತೀಯ ಭಾಷೆಯ ಆಯ್ಕೆ ಹೇಗೆಲ್ಲಾ ಇರಲಿದೆ? ಎಂಬ ಸಾಮಾನ್ಯ ಜ್ಞಾನವೂ ಕೂಡ ಇಲ್ವಾ? ಎಂಬುದನ್ನು ಯೋಚಿಸಿದಾಗಲೇ ಬಹಳ ಬೇಜಾರು ಆಗುತ್ತದೆ. ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ವಿದ್ಯಾರ್ಥಿಯಾದ್ರೂ ಪ್ರಥಮ ಭಾಷೆ ತೆಗೆದುಕೊಂಡರೆ ಅದು 125 ಅಂಕಗಳಿಗೆ ಬರೆಯಬೇಕಾಗುತ್ತದೆ. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಭಾಷೆಗಳನ್ನು ತಲಾ 100 ಅಂಕಗಳಿಗೆ ಸೀಮಿತಗೊಳಿಸಿ ಇಲಾಖೆ ಆದೇಶಿಸಿದ್ದು, ಅದನ್ನು ಬರೆಯಬೇಕಾಗುತ್ತದೆ. ಇನ್ನುಳಿದಂತೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕಗಳು ಮೀಸಲಿರಲಿದೆ. ಯಾವ ವಿದ್ಯಾರ್ಥಿ ಕನ್ನಡ ಭಾಷೆಯನ್ನು ತನ್ನ ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿರುತ್ತಾನೋ, ಆತನಿಗೆ ಕ್ರಮವಾಗಿ ದ್ವಿತೀಯ ಭಾಷೆಯಾಗಿ ಇಂಗ್ಲೀಷ್, ತೃತೀಯ ಭಾಷೆಯಾಗಿ ಹಿಂದಿ ಬರೆಯುವ ಅವಕಾಶ ದೊರಕಲಿದೆ. ಇನ್ನು ಯಾವ ವಿದ್ಯಾರ್ಥಿ ಪ್ರಥಮ ಭಾಷೆ ಕನ್ನಡ ಹೊರತುಪಡಿಸಿ, ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಉರ್ದು, ಮರಾಠಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾನೋ ಆತ ಕ್ರಮವಾಗಿ ದ್ವಿತೀಯ ಭಾಷೆ ಇಂಗ್ಲೀಷ್ ಹಾಗೂ ತೃತೀಯ ಭಾಷೆ ಕನ್ನಡ ಬರೆಯಲು ಅವಕಾಶ ಗಿಟ್ಟಿಸಿಕೊಂಡಿರುತ್ತಾನೆ.ಇಲ್ಲೇ, ಇಲ್ಲೇ ನೋಡಿ ಆಗಿರುವುದು ಎಡವಟ್ಟು. ಕೇಂದ್ರ ಸರ್ಕಾರ ಪ್ರತಿ ರಾಜ್ಯದ ಮೇಲೂ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಲು ಮುಂದಾಗಿದೆ. ಇದು ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ ಎನ್ನುವ ಸಂದೇಶ ಸಾರಲು ಹೊರಟಿರುವ ರಾಜ್ಯ ಸರ್ಕಾರ ಈಗ ದೊಡ್ಡದಾದ ಎಡವಟ್ಟು ಒಂದನ್ನು ಮಾಡಿಬಿಟ್ಟಿದೆ. ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಏಕಾಏಕಿ ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ 625 ರ ಅಂಕದ ಬದಲಿಗೆ 525 ಅಂಕಗಳನ್ನು ಪರಿಗಣಿಸಿ, ತೃತೀಯ ಭಾಷೆಗೆ ಗ್ರೇಡ್ ಕೊಡುತ್ತೇವೆ ಎನ್ನುತ್ತಾ, ಕೇಂದ್ರದ ತ್ರಿಭಾಷಾ ನೀತಿಯನ್ನು ಕತ್ತರಿಸಿ ತೆರೆಮರೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ವೇದಿಕೆ ಸೃಷ್ಟಿಸಿಬಿಟ್ಟಿದೆ.
ಈ ಶೈಕ್ಷಣಿಕ ವರ್ಷದಲ್ಲಿ 8.80 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಪ್ರವೇಶವನ್ನು ಪಡೆದಿದ್ದು, ಅವರೆಲ್ಲಾ ತೃತೀಯ ಭಾಷೆಯಾಗಿ ಹಿಂದಿ ವಿಷಯವನ್ನೇ ಆಯ್ಕೆ ಮಾಡಿಲ್ಲ. ಕೆಲವರು ನಾವು ಉಲ್ಲೇಖಿಸಿದಂತೆ ಪ್ರಥಮ ಭಾಷೆಯಾಗಿ ಸಂಸ್ಕೃತ, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದಿ ಹೇರಿಕೆ ಕೇಂದ್ರ ಸರ್ಕಾರದ ನೀತಿ ಅದನ್ನು ಶತಾಯಗತಾಯ ತಪ್ಪಿಸಿಯೇ ತೀರುತ್ತೇವೆ ಎನ್ನುವುದನ್ನು ಸಾರಲು ಹೊರಟ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಮೇಲೆ ಈ ನಿರ್ಧಾರದಿಂದ ಆಗುವ ಪರಿಣಾಮ ಲೆಕ್ಕಿಸದೇ ಏಕಾಏಕಿ ಅಂಕ ಕಡಿತಗೊಳಿಸಿದೆ.
ಈಗ ಕನ್ನಡ ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆ ಬೇರೆ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಕನ್ನಡವೇ ಇರಲಿದೆ. ಈಗ ತೃತೀಯ ಭಾಷೆ ಲೆಕ್ಕಕ್ಕೇ ಇಲ್ಲ ಎಂದರೆ ಕನ್ನಡವೇ ಇಲ್ಲ ಎಂಬರ್ಥ ಅಲ್ಲವೇ? ಸರ್ಕಾರ ಕರ್ನಾಟಕದಲ್ಲಿ ಕನ್ನಡಕ್ಕೆ ದ್ರೋಹ ಬಗೆದಂತೆ ಆಗುವುದಿಲ್ಲವೇ?
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ಮಾತಿದೆ. ಹಾಗಿದ್ದಲ್ಲಿ ತೃತೀಯ ಭಾಷೆಯಾಗಿ ವಿದ್ಯಾರ್ಥಿಗಳು ಕನ್ನಡ ಆಯ್ಕೆ ಮಾಡಿಕೊಂಡಿದ್ದ ಪಕ್ಷದಲ್ಲಿ ಅದನ್ನು ರದ್ದು ಮಾಡುತ್ತಾ ಸರ್ಕಾರ ಕನ್ನಡಕ್ಕೆ ದ್ರೋಹ ಮಾಡಿದಂತೆ ಆಗಿಲ್ಲವೇ? ಇದನ್ನೆಲ್ಲಾ ಮಾನ್ಯ ಶಿಕ್ಷಣ ಸಚಿವರು ಅರ್ಥ ಮಾಡಿಕೊಂಡಿಲ್ಲವೇ? ದಾಖಲೆ ಬಜೆಟ್ ಮಂಡಿಸಿದ್ದೇನೆ, ಅತಿ ಹೆಚ್ಚು ಕಾಲ ಮುಖ್ಯಮಂತ್ರಿಗಳ ಸ್ಥಾನ ಅಲಂಕರಿಸಿದ್ದೇನೆ ಎನ್ನುವ ಸಿಎಂ ಸಿದ್ಧರಾಮಯ್ಯ ಇದನ್ನು ಲೆಕ್ಕ ಹಾಕಲಿಲ್ಲವೇ?
ಹಿಂದಿ ಹೇರಿಕೆಯನ್ನು ತಪ್ಪಿಸುವ ಭರಾಟೆ
ಯಲ್ಲಿ ಕನ್ನಡಕ್ಕೆ ಬರೆ ಹಾಕಿದಂತಹ ಕೆಲಸ ಆಗಿದೆ ಎಂಬ ಸಾಮಾನ್ಯ ಜ್ಞಾನ ಕೂಡ ಸರ್ಕಾರಕ್ಕೆ ಬರಲಿಲ್ಲವೇ?
ಇದೆಲ್ಲಾ ಪ್ರಶ್ನೆಗಳು ಸರ್ಕಾರ ಮಾಡಿದ ಅದೊಂದು ನಿರ್ಧಾರದಿಂದ ಹುಟ್ಟಿಕೊಂಡಿದೆ. ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಇದರ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಪ್ರಸ್ತಾಪಿಸಿದ್ದು, ಅವರ ಮಾತನ್ನೇ ಕನ್ನಡ ಪರ ಸಂಘಟನೆಗಳು ತಪ್ಪಾಗಿ ಅರ್ಥೈಸಿದ್ದು ವಿವಾದಕ್ಕೆ ರೆಕ್ಕೆ ಪುಕ್ಕ ಬಂದಂತಾಗಿದೆ.
ಹಿAದಿ ಹೇರಿಕೆ ಮಾಡಬಾರದು ಸರಿ. ಅದಕ್ಕೆಂದು ನಮ್ಮ ಭಾಷೆಗೂ ಈ ನೀತಿ ದ್ರೋಹ ಮಾಡುತ್ತಿರುವುದು ಕಣ್ಮುಂದೆ ಸ್ಪಷ್ಟವಾಗಿ ಕಾಣುತ್ತಿದ್ರೂ ಸರ್ಕಾರದ ಜನಪ್ರತಿನಿಧಿಗಳು ಇದರ ಬಗ್ಗೆ ತುಟಿಬಿಚ್ಚುತ್ತಿಲ್ಲವೇಕೆ? ಕನ್ನಡ ಕನ್ನಡ ಎಂದು ಹೋರಾಟ ಮಾಡುವ ಕನ್ನಡ ಪರ ಸಂಘಟನೆಗಳು ತೃತೀಯ ಭಾಷೆ ಕನ್ನಡ ತೆಗೆದುಕೊಂಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಳಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು ಎಂಬೆಲ್ಲಾ ಹೇಳಿಕೆಗಳನ್ನು ಕೊಡುವುದು ಕೇವಲ ನೆಪಮಾತ್ರಕ್ಕಾ? ಎಂಬ ಅನುಮಾನಗಳು ಈಗ ಹುಟ್ಟಿಕೊಳ್ಳುತ್ತಿದೆ.
ಹಿಂದಿ ಹೇರಿಕೆ ಸರಿಯಲ್ಲ ಎನ್ನುವುದೇ ಆದರೆ, ಕನ್ನಡಕ್ಕೂ ಪೆಟ್ಟು ಬೀಳದ ರೀತಿಯಲ್ಲಿ ನೀತಿ ರೂಪಿಸಬೇಕು, ರೂಪಿಸಬಹುದು ಅಲ್ಲವೇ? ಹಿಂದಿ ಹೇರಿಕೆ ತಪ್ಪಿಸಲು “ಎದುರಾಳಿಯ ಎರಡು ಕಣ್ಣು ಕೀಳುವ ಭರಾಟೆಯಲ್ಲಿ ನಮ್ಮ ಒಂದು ಕಣ್ಣನ್ನು ನಾವೇ ಕಿತ್ತುಕೊಳ್ಳಲು ಆಗುತ್ತದಾ?”. ಇಂತಹ ನೀತಿ ತರುವಾಗ ಪೂರ್ವ ಪರ ಸರ್ಕಾರ ಯೋಚಿಸಲಿಲ್ಲವೇ? ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಇನ್ನು ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ 8.80 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅದರ ಪೈಕಿ ಶೇ.40% ರಷ್ಟು ಮಕ್ಕಳು ತೃತೀಯ ಭಾಷೆಯಾಗಿ ಕನ್ನಡ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಹಿಂದಿ ಹೇರಿಕೆ ತಪ್ಪಿಸಿ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಮುಂದಾಗಿರುವ ಸರ್ಕಾರ, ಆ ಶೇ. 40% ರಷ್ಟು ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಿದ್ದು, ಕನ್ನಡ ಕಲಿಯಲು ಆಸಕ್ತಿ ತೋರಿದ್ದ ವಿದ್ಯಾರ್ಥಿಗಳ ಜೀವನಕ್ಕೆ ಕೊಳ್ಳಿ ಇಟ್ಟಿದೆ.
ಒಟ್ಟಾರೆ, ಹಿಂದಿ ಹೇರಿಕೆ ತಪ್ಪಿಸಿ, ರಾಜ್ಯದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳಿಸುವ ಭರಾಟೆಯಲ್ಲಿ ತಮ್ಮ ತಾವೇ ಕತ್ತಲ ಕೋಣೆಗೆ ಕರೆದ್ಯೊಯ್ಯುವಂತಹ ನೀತಿಯನ್ನು ಆದೇಶಿಸಿದೆ.
ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ ನಿಮಗೆ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದರೇ ನೀವೇ ತಂದಿರುವ ಈ ನೀತಿ ಮರು ಪರಿಶೀಲನೆ ಮಾಡಿ. ಪರೀಕ್ಷೆಯ ಸಂದರ್ಭದಲ್ಲಿ ಇಂತಹ ಆದೇಶ ಮಾಡುವ ಬದಲಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕಟ್ಟುನಿಟ್ಟಿನ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿ.
ಈ ಶೈಕ್ಷಣಿಕ ವರ್ಷವೇನೋ ಗೊಂದಲ, ಆತಂಕ ಹಾಗೂ ಟೆನ್ಷನ್ ಸೃಷ್ಟಿಸಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತಿದ್ದೀರಿ. ಮುಂದಿನ ವರ್ಷವಾದರೂ ವಿದ್ಯಾರ್ಥಿಗಳಿಗೆ ಆತಂಕವಿಲ್ಲದೇ ಪರೀಕ್ಷೆಯನ್ನು ಬರೆಯುವ ವಾತಾವರಣ ಸೃಷ್ಟಿಸಿಕೊಡಿ ಎಂಬುದಷ್ಟೇ ನಮ್ಮ ಕಳಕಳಿ.
* ತೃತೀಯ ಭಾಷೆಗಳು ಕನ್ನಡ ಭಾಷೆಯೂ ಸೇರಿದಂತೆ 9 ಭಾಷೆಗಳಿದ್ದು, ಎಲ್ಲಾ ಭಾಷೆಗಳಿಗೆ ಗ್ರೇಡ್ಗಳು. [ಹಿಂದಿ,ಕನ್ನಡ, ಇಂಗ್ಲೀಷ್, ಅರೇಬಿಕೆ, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ] .
* ಕನ್ನಡ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ಹಾಗೂ CBSE /ISCB ಸಿಲಬಸ್ ನಲ್ಲಿ ಓದುತ್ತಿದ್ದ ಕನ್ನಡ ಮಕ್ಕಳಿಗೆ, ಕನ್ನಡೇತರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಪೋಷಕರ ಮಕ್ಕಳಿಗೆ ಅಲ್ಲಿ ಕನ್ನಡ ಕಲಿಯಲು ಅವಕಾಶ ಇಲ್ಲದಿದ್ದವರಿಗೆ, ಇಲ್ಲಿ ಕನ್ನಡ ಕಲಿಯಲು ಅವಕಾಶಗಳು ಇದ್ದವು. ಈಗ ಪರೀಕ್ಷೆಯು ಕಡ್ಡಾಯವಲ್ಲದ ಕಾರಣ, ಕನ್ನಡ ಭಾಷೆಯನ್ನೂ ಸಹ ಮೂಲೆಗುಂಪು ಮಾಡುವಂತಾಗಿದೆ.
9 ಭಾಷೆಗಳಿಗೆ ಗ್ರೇಡ್ಗಳು
* ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ
ಶಾಲೆಯ ಹಂತದಲ್ಲಿ ತೃತೀಯ ಭಾಷೆ
ಯನ್ನು ಬೋಧಿಸುವ ಶಿಕ್ಷಕರ ನೇಮಕವನ್ನು
ಸಕಾಲದಲ್ಲಿ ಮಾಡಿದ್ದಲ್ಲಿ ವಿದ್ಯಾರ್ಥಿಗಳು
ನಪಾಸಾಗುವುದನ್ನು ತಪ್ಪಿಸಬಹುದಾಗಿ ತ್ತೇನೋ? ಈಗ ಹಿಂದಿ ವಿಷಯದ ಜೊತೆಗೆ
ಕನ್ನಡ ಬಾಷೆಯೂ ಸಹ ಬಲಿಪಶುವಾಗು ತ್ತಿರುವುದು ಖೇದದ ಸಂಗತಿಯಾಗಿದೆ.
* ಕನ್ನಡ ಉಳಿಸಬೇಕಾದ ಕರ್ನಾಟಕದಲ್ಲಿ ಕನ್ನಡ ಕಲಿಯುವವರು ಯಾರು? ಉಳಿಸು ವವರು ಯಾರು? ಬೆಳೆಸುವವರು ಯಾರು?
* ಸರ್ಕಾರ ಶಿಕ್ಷಣ ತಜ್ಞರ / ಪೋಷಕರ ಅಭಿಪ್ರಾಯ ಪಡೆದಿದ್ದರೆ ಉತ್ತಮವಾಗಿತ್ತು. ಯಾವುದೇ ಭಾಷೆಯು ಒಬ್ಬ ವ್ಯಕ್ತಿಯ ಸಂವಹನಕ್ಕೆ ಅಡಿಪಾಯವಾಗುವುದು, ಜ್ಞಾನ ಬಂಡಾರ ಹೆಚ್ಚಿಸುವುದು. ವೈಯಕ್ತಿಕ ಬೆಳವಣಿಗೆ, ವ್ಯವಹಾರಕ್ಕೆ, ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅನುಕೂಲವಾಗುವುದಕ್ಕೆ ಧಕ್ಕೆಯಾಗುತ್ತಿದೆ.
* ರಾಜ್ಯದಲ್ಲಿ NEP ಜಾರಿಯಾಗಿರುವುದಿಲ್ಲ SEP ಬಗ್ಗೆ ಸ್ಪಷ್ಟತೆ ಇಲ್ಲ. ತೃತೀಯ ಭಾಷೆಯನ್ನಾಗಿ ಕನ್ನಡವನ್ನು ಉಳಿಸುವ ಬಗ್ಗೆ (ಕಡ್ಡಾಯ ಪರೀಕ್ಷೆಯನ್ನು ನಡೆಸುವ) ಸರ್ಕಾರದ ನಿಲುವನ್ನು ಬದಲಿಸುವುದೇ? ಕಾದುನೋಡೋಣ.
– ಅಜಿತ್ ಸಾಗರ್.ಎನ್
ಪರೀಕ್ಷೆಯ ಸಂದರ್ಭದಲ್ಲಿ ತೃತೀಯ ಭಾಷೆಗೆ ಆಗಿದ್ದೇನು?



