ಬೆಂಗಳೂರು: ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಅವರಿಗೆ ಕೊನೆ ಕ್ಷಣದಲ್ಲಿ ಕೋಲಾರ ಕ್ಷೇತ್ರದ ಟಿಕೆಟ್ ಕೈತಪ್ಪಿದರೂ, ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಸಮುದಾಯದ ಮುಂದಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹಿತದೃಷ್ಟಿಯಿಂದ ಕೋಲಾರವೂ ಸೇರಿದಂತೆ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರ್ನಾಟಕ ಮಾದಿಗ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ಕಬ್ಬನ್ ಪಾರ್ಕ್ ನಲ್ಲಿರುವ ಟೆನಿಸ್ ಅಸೋಸಿಯೇಶನ್ ಸಭಾಂಗಣದಲ್ಲಿ ಡಾ. ಎಲ್. ಹನುಮಂತಯ್ಯ ಅವರ ನೇತೃತ್ವದಲ್ಲಿ ಸಮುದಾಯದ ಪ್ರಮುಖ ಮುಖಂಡರ ಸಭೆ ನಡೆಯಿತು. ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರಿಗೆ ಎರಡನೇ ಅವಕಾಶ ನೀಡಿದ ಕಾಂಗ್ರೆಸ್ ಪಕ್ಷ, ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಪ್ರಬುದ್ಧ ರಾಜಕಾರಣಿ ಕಳೆದ ಆರು ವರ್ಷಗಳ ಕಾಲ ರಾಜ್ಯಸಭೆಯಲ್ಲಿ ತಮ್ಮ ಪ್ರತಿಭೆ ಮೆರೆದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಘನತೆಯನ್ನು ಎತ್ತಿ ಹಿಡಿದ ಡಾ ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಅವರೇನು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ನ ಹೈಕಮಾಂಡ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ವಿಷಯ ಬಂದಾಗ ಡಾ ಎಲ್ ಹನುಮಂತಯ್ಯ ರವರ ಹೆಸರು ಮುಂಚೂಣಿಯಲ್ಲಿತ್ತು. ಟಿಕೆಟ್ ಪಡೆದುಕೊಳ್ಳಲು ಪ್ರಯತ್ನವೂ ನಡೆದಿತ್ತು. ಅದರೂ ಬೇರೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಪರಿಶಿಷ್ಟ ಜಾತಿ ಅದರಲ್ಲೂ ಮಾದಿಗ ಸಮುದಾಯದಲ್ಲಿರುವ ಪ್ರತಿಭಾ ವಂತರನ್ನು ಈ ರೀತಿ, ಕಾಂಗ್ರೆಸ್ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್ನಿಂದ ಆಗಿರುವ ತಾರತಮ್ಮ, ಅನ್ಯಾಯದ ಮಧ್ಯೆಯೂ, ಸಮುದಾಯದ ಮತಗಳು ಇತರ ಪಕ್ಷಗಳಿಗೆ ಚದುರಿ ಹೋಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಡಾ. ಎಲ್. ಹನುಮಂತಯ್ಯ ತಿಳಿಸಿದರು.