ಈ ಬಾರಿ ರಾಯಲ್ ಚಾಲೆಂಜರ್ಸ್ ತಂಡದ ವೇಳಾಪಟ್ಟಿಯನ್ನು ನೋಡಿದ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದ್ದರೂ ರಾಯಪುರದಲ್ಲಿ 2 ಪಂದ್ಯಗಳು ಯಾಕೆ ನಡೆಯುತ್ತಿದೆ ಎಂಬುದೇ ಬಹುತೇಕರನ್ನು ಕಾಡುವ ಪ್ರಶ್ನೆ. ಇದಕ್ಕೆ ಕಾರಣ ಆರ್ ಸಿಬಿ ಫ್ರಾಂಚೈಸಿಯು ಛತ್ತೀಸ್ ಗಡ ಮುಖ್ಯಮಂತ್ರಿ ಅವರಿಗೆ ಕೊಟ್ಟ ಮಾತು! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಅವಕಾಶ ಸಿಗದೇ ಹೋದರೆ ಅಲ್ಲಿ ಆಡುವುದೆಂದು ನಿರ್ಧಾರವಾಗಿತ್ತು. ಇದೀಗ ಅನುಮತಿ ಸಿಕ್ಕಿದ್ದರೂ ಈ ಹಿಂದಿನ ಒಪ್ಪಂದದ ಪ್ರಕಾರ ಆರ್ ಸಿಬಿಯು ರಾಯ್ಪುರದಲ್ಲಿ 2 ಪಂದ್ಯಗಳನ್ನು ಆಡುತ್ತಿದೆ.
ಐಪಿಎಲ್ 2026ರಲ್ಲಿ ಎಲ್ಲಾ ತಂಡಗಳಿಗೂ ತವರಿನಲ್ಲಿ 7 ಪಂದ್ಯಗಳಿವೆ. ಆದರೆ ಆರ್ ಸಿಬಿಯ ತವರು ಮೈದಾನವಾದ ಚಿನ್ನಸ್ವಾಮಿ ಮೈದಾನದಲ್ಲಿ 5 ಪಂದ್ಯಗಳು ಮಾತ್ರ ನಡೆಯುತ್ತಿವೆ. ಇನ್ನುಳಿದ ತವರಿನ 2 ಪಂದ್ಯಗಳು ಛತ್ತೀಸ್ಗಢದ ರಾಜಧಾನಿಯಾದ ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ರಾಯಪುರದಲ್ಲಿ ಮೇ 10ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮತ್ತು 13ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯಗಳು ಅಲ್ಲಿ ನಿಗದಿಯಾಗಿವೆ. ಇದು ಕರ್ನಾಟಕದಲ್ಲಿರುವ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಆರ್ ಸಿಬಿ ಅಭಿಮಾನಿಗಳಿಗೆ ಕೊಂಚ ದುಃಖದ ಸಂಗತಿಯಾಗಿದೆ. ಭಾರತ ತಂಡದ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಏಕಕಾಲದಲ್ಲಿ ಮೈದಾನದಲ್ಲಿ ಕಾಣುವ ಅವಕಾಶ ತಪ್ಪಿಹೋಗಿದೆ. ಇನ್ನುಳಿದಂತೆ ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಆರ್ಸಿಬಿಯ ತವರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
ಕಳೆದ ವರ್ಷ ಕಾಲ್ತುಳಿತ ದುರಂತದ ಬಳಿಕ ಕರ್ನಾಟಕ ಸರ್ಕಾರವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಗೂ ನಿರ್ಬಂಧ ಹೇರಿತ್ತು. ಐಪಿಎಲ್ ಪಂದ್ಯವನ್ನಾಡಿಸಲೂ ಅನುಮತಿ ನೀಡಿರಲಿಲ್ಲ. ಹೀಗಾಗಿ ಪರ್ಯಾಯ ಕ್ರೀಡಾಂಗಣದ ಹುಡುಕಾಟದಲ್ಲಿದ್ದ ಆರ್ ಸಿಬಿಯು ಈ ವರ್ಷದ ಆರಂಭದಲ್ಲಿ, ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ ಆರ್ಸಿಬಿ ಸಿಇಒ ರಾಜೇಶ್ ಮೆನನ್ ಮತ್ತು ಬಿಸಿಸಿಐ ಖಜಾಂಚಿ ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಭೇಟಿಯಾಗಿದ್ದರು.
ಆರ್.ಸಿ.ಬಿ ತವರಿನ 2 ಪಂದ್ಯಗಳನ್ನು ರಾಯಪುರದಲ್ಲಿ ಆಡಲು ಏನು ಕಾರಣ?



