“ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವೇನು?”- ಇದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ಗಂಭೀರವಾದ ಪ್ರಶ್ನೆ. ಅವರ ಸಾಮರ್ಥ್ಯದ ಪ್ರಕಾರ ಅವರು ಉನ್ನತ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು. ಅದನ್ನು ಬಿಟ್ಟು ಅವರು 8ನೇ ಅಥವಾ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುತ್ತಾರೆಂದಾದಲ್ಲಿ ಅದರಿಂದ ಏನು ಪ್ರಯೋಜನ ಎಂದು ಕಡ್ಡಿ ಮುರಿದಂತೆ ಪ್ರಶ್ನಿಸಿದ್ದಾರೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗಳೆರಡಕ್ಕೂ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಅವರು ಕಳೆದ ಐದಾರು ವರ್ಷಗಳಿಂದ ಕೇವಲ ಚೆನ್ನೈ ಸೂಪರ್ ಕಿಂಗ್ಸ್ (ಸಿ.ಎಸ್.ಕೆ) ತಂಡದ ಪರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಲ್) ನಲ್ಲಿ ಮಾತ್ರ ಆಡುತ್ತಿದ್ದಾರೆ. ಪ್ರತಿಬಾರಿಯೂ ಐಪಿಎಲ್ ನಡೆಯುವ ಮುನ್ನ ಧೋನಿ ಆಟವಾಡುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಅಂತಿಮ ಹಂತದಲ್ಲಿ ಅವರನ್ನು ಒಪ್ಪಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ.
ಅವರ ಬ್ಯಾಟಿಂಗ್ ಕ್ರಮಾಂಕದ ಕುರಿತು ಈ ಹಿಂದೆ ರವಿಚಂದ್ರನ್ ಅಶ್ವಿನ್ ಅವರು ಮಾತನಾಡಿದ್ದರು. ಇದೀಗ ಅವರ ಈ ಗೆಸ್ಟ್ ಅಪೀಯರೆನ್ಸ್ ಬಗ್ಗೆ ಎಬಿಡಿ ವಿಲಿಯರ್ಸ್ ಪ್ರಶ್ನೆಗಳನ್ನೆತ್ತಿದ್ದಾರೆ. ಅವರು ಈ ಬಾರಿಯೂ ಇದೇ ರೀತಿಯಲ್ಲಿ ಆಡುವುದಾದಲ್ಲಿ ತಂಡದಲ್ಲಿರುವುದಕ್ಕೆ ಯಾವುದೇ ರೀತಿಯ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಜಿಯೋ ಸ್ಟಾರ್ ನಲ್ಲಿ ಮಾತನಾಡಿದ ಅವರು, ಅವರು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ತಂಡಕ್ಕೆ ಅನುಕೂಲ, ಒಂದು ವೇಳೆ 4 ಅಥವಾ 5ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದರೆ ಇನ್ನೂ ಉತ್ತಮ. ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿ ಬಹಳ ಅನುಭವ ಇರುವ ಅವರು ತಮ್ಮನ್ನು ತಾವು ಒತ್ತಡಕ್ಕೆ ಈಡುಮಾಡಿಕೊಂಡು ಆಡಿದರೆ ಅದರಿಂದ ತಂಡಕ್ಕೂ ಅನುಕೂಲ ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಫ್ರಾಂಚೈಸಿಯು ಹರಾಜು ಪ್ರಕ್ರಿಯೆಗೂ ಮುನ್ನ ನಡೆದ ಟ್ರೇಡ್ ನಲ್ಲಿ ಅನುಭವಿ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್ ಗೆ ಬಿಟ್ಟುಕೊಟ್ಟು ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹೀಗಾಗಿ ಈ ಬಾರಿ ಸಂಜು ಸ್ಯಾಮ್ಸನ್ ಅವರು ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುವ ಎಲ್ಲಾ ಸಾಧ್ಯತೆಗಳಿರುವುದರಿಂದ ಧೋನಿ ಅವರಿಗೂ ಹೆಚ್ಚು ಒತ್ತಡ ಇರುವುದಿಲ್ಲ ಎಂದು ರಾಬಿನ್ ಉತ್ತಪ್ಪ ಅವರು ಹೇಳಿದ್ದರು.
ಸಿ.ಎಸ್.ಕೆ ಧೋನಿ ಪಾತ್ರವೇನು? 8-9 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಏನು ಪ್ರಯೋಜನ?: ಎಬಿಡಿ ವಿಲಿಯರ್ಸ್ ಪ್ರಶ್ನೆ



