ಬೆಳಗಾವಿ: ಸ್ಪೀಕರ್ ಸ್ಥಾನದ ಕುರಿತು ನನ್ನ ಮಾತಿನಲ್ಲಿ ತಪ್ಪೇನಿದೆ ಎಂದು ಪ್ರೆಶ್ನೆ ಮಾಡಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಬಿಜೆಪಿ ಅವರಿಗೆ ವಿವಾದ ಸೃಷ್ಟಿ ಮಾಡುವುದೇ ಕೆಲಸ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಗೌರವಯುತ ಹುದ್ದೆ ಯಾದ ಸ್ಪೀಕರ್ ಸ್ಥಾನ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಮಾನ್ಯ ಯು.ಟಿ.ಖಾದರ್ ಅವರಿಗೆ ನೀಡಿದೆ. ಸ್ಪೀಕರ್ ಪೀಠ ಕ್ಕೆ ನಾನೂ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಸನ್ಮಾನ್ಯ ಸಭಾಧ್ಯಕ್ಷರೇ ಎಂದು ನಮಸ್ಕರಿಸಿ ಗೌರವ ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ನೀಡಿದ ಗೌರವ ಹುದ್ದೆ ಬಗ್ಗೆ ಉಪಕಾರ ಸ್ಮರಣೆ ಮಾಡಿದ್ದೇನೆ ಇದು ತಪ್ಪಾ ಎಂದು ಕೇಳಿದರು.
ಹೈದರಾಬಾದ್ ನಲ್ಲಿ ನಾನು ಮಾತನಾಡಿದ ಸಂದರ್ಭ, ವೇದಿಕೆ, ಅಲ್ಲಿನ ಸಂವಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲದೆ ಕೇವಲ ರಾಜಕೀಯ ಲಾಭ ಪಡೆಯಲು ವಿವಾದದ ಸ್ವರೂಪ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಬಿಜೆಪಿ ನಾಯಕರು ನನ್ನ ಮಾತು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರಿಗೆ ಬೇಕಾದಂತೆ ತಿರುಚಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ನೀಡುವ ಬಗ್ಗೆ ಮಾತನಾಡಿದರೆ ಬಿಜೆಪಿ ಅವರು ಅದನ್ನೂ ವಿವಾದ ಮಾಡುತ್ತಾರೆ. ಅವರ ಮಾತುಎಲ್ಲ ಸಮುದಾಯ ಅಭಿವೃದ್ಧಿ ಕಾಣಬೇಕು ಎಂಬುದು. ಸಾಮಾಜಿಕ ನ್ಯಾಯ ಕಾಂಗ್ರೆಸ್ನ ಬದ್ಧತೆ ಎಂದು ತಿಳಿಸಿದರು.
ಮೌಲಾನಾ ತನ್ವಿರ್ ಹಾಶ್ಮಿ ಕುರಿತ ಹೇಳಿಕೆ ಬಗ್ಗೆ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ಸಚಿವರು, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೈಯಕ್ತಿಕ ದ್ವೇಷದಿಂದ ಹೇಳಿದ್ದಾರೆ. ಅವರು ತಮ್ಮ ಆರೋಪ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು. ಯತ್ನಾಳ್ ಹಾಗೂ ಹಾಶ್ಮಿ ಅವರು ಒಂದೇ ಜಿಲ್ಲೆ ಅವರು.
ಇವರಿಗೆ ಮೊದಲಿನಿಂದಲೂ ಅವರ ಬಗ್ಗೆ ದ್ವೇಷ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಸಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ತನ್ವಿರ್ ಹಾಶ್ಮಿ ಬಗ್ಗೆ ಯತ್ನಾಳ್ಗೆ ಹೊಟ್ಟೆ ಕಿಚ್ಚು. ಅವರು ಜೆಡಿಎಸ್ನಲ್ಲಿದ್ದಾಗ ಎಷ್ಟು ಬಾರಿ ಇವರ ಮನೆಗೆ ರಿ ಹೋಗಿದ್ದರು ಎಂಬ ಬಗ್ಗೆಯೂ ಹೇಳಲಿ ಎಂದು ಪ್ರೆಶ್ನೆ ಮಾಡಿದರು.