ಬೆಂಗಳೂರು: ಬಹಳ ಕಾಲದಿಂದಲೂ ಮೂಲ ಬೆಂಗಳೂರಿನ ಮಂದಿಗೆ ‘ಬೆಂಗಳೂರು ಮತದಾನ ನೀರಸ ಪ್ರತಿಕ್ರಿಯೆ’ ಎಂಬ ಮಾತುಗಳು ಕೇಳಿ ಪ್ರಶ್ನೆ ಮೂಡುತ್ತದೆ. ಶೇಕಡಾ 40-50 ಮತದಾನ ಲೆಕ್ಕಾಚಾರ ಹೇಗೆ ? ಮತದಾನದ ಪಟ್ಟಿಯಲ್ಲಿ ಇರುವ ಅಂಕಿ ಅಂಶಗಳ ಆಧಾರದಿಂದ ಇದನ್ನು ಹೇಳುತ್ತಾರಾ ಅಥವಾ ಬೆಂಗಳೂರಲ್ಲಿ ನೆಲೆಸಿರುವವರ ಅಸಂಖ್ಯಾತ ಜನಗಳ ಲೆಕ್ಕಾಚಾರದಿಂದ ಆಪಾದನೆ ಹೊರೆಸುವರೋ ಎನ್ನುವ ಸಂಶಯ ಕಾಡುತ್ತದೆ.
ಮತದಾನದ ಸಮಯದಲ್ಲಿ ರಜೆಯ ಮಜಾ, ಮೋಜು ಮಸ್ತೀ ಮಾಡಲು ಪ್ರವಾಸ ಹೋಗುತ್ತಾರೆ ಎನ್ನುವರು. “ಮತದಾನ ನಮ್ಮ ಹಕ್ಕು” ಎಂಬ ಘೋಶ ವಾಕ್ಯ ಎಲ್ಲರಿಗೂ ತಿಳಿದಿದೆ. ಮನಸ್ಸು ಇಟ್ಟು ಪಾಲಿಸುವವರು ಮತ ಹಾಕೇ ಹಾಕುತ್ತಾರೆ. ಇನ್ನೂ ನಮ್ಮೂರಿನ ವಿಚಾರ, ಬೆಂಗಳೂರಿನಲ್ಲಿ ಇರುವವರೆಲ್ಲರೂ ಇಲ್ಲಿಯವರು ಅಲ್ಲ ಅಲ್ವಾ. ವ್ಯಾಪಾರ-ವ್ಯವಹಾರ, ಶಿಕ್ಷಣ ಹೀಗೆ ನಾನು ಕಾರಣಗಳಿಂದ ಬಂದು ಇಲ್ಲಿಯೇ ಬದುಕು ಕಟ್ಟಿ ಕೊಂಡಿರುವ ಮಂದಿಯೇ ಬಹಳ. ಪ್ರವಾಸಕ್ಕೆಂದು ವಿದೇಶದಿಂದ ಬಂದು ಇಲ್ಲಿಯೇ ನೆಲೆನಿಂತವರಿಗೂ ಕಮ್ಮಿಯಿಲ್ಲ.
ಇಲ್ಲಿಯವರಲ್ಲದ ಮಂದಿ ಸಾಲು ಸಾಲು ರಜೆಗಳಲ್ಲಿ ಇಲ್ಲಿದ್ದು ಮಾಡುವುದೇನು ಪ್ರವಾಸ ಹೋಗಬೇಕು ಎಂದುಕೊಳ್ಳುವುದರಲ್ಲಿ ತಪ್ಪೂ ಇಲ್ಲ. ಯಾರೂ ಸರ್ವೇ ಬರಲ್ಲ ಇರೋ ಪಟ್ಟಿಯಲ್ಲಿ ಇಲ್ಲದೇ ಇರೋರು ಎಷ್ಟು ಮಂದಿ… ಹೊಸದಾಗಿ ಹೆಸರು ಸೇರಿಸಲು ಆನ್ ಲೈನ್ ಇದ್ರೂ ಉಪಯೋಗವಿಲ್ಲವಂತೆ. ಇನ್ನೂ ಪಟ್ಟಿಗೆ ಸಂಬಂಧ ಪಟ್ಟ ಕಛೇರಿಯಲ್ಲಿ ಅಲೆದಾಡಿಸುತ್ತಾರೆ. ಇದಕ್ಕೆಲ್ಲಾ ಯಾರು ಹೊಣೆ…
ರಾಜಕೀಯ ವ್ಯಕ್ತಿಗಳು, ಮನೋರಂಜನೆ ಮಾಧ್ಯಮಗಳಲ್ಲಿ, ಪತ್ರಿಕಾ ರಂಗದಲ್ಲಿ ಇರುವ ಅರ್ಧದಷ್ಟು ವ್ಯಕ್ತಿಗಳೂ ಸಹ ನಾನು ಊರುಗಳಿಂದ ಮತ್ತು ರಾಜ್ಯಗಳಿಂದ ಬಂದು ನೆಲೆಸಿರುವವರು ಆಗಿರುತ್ತಾರೆ. ಇಂತಹವರ ಮತ ಚಲಾಯಿಸುವ ಹಕ್ಕು ತಮ್ಮ ತಮ್ಮ ಊರುಗಳಲ್ಲಿಯೇ ಇರುತ್ತದೆ ಅಲ್ಲವೇ? ಹೀಗಿದ್ದಾಗ ಬೆಂಗಳೂರಿನಲ್ಲಿ ಕನಿಷ್ಠ ಮತದಾನ, ನೀರಸ ಮತದಾನ ಎನ್ನುವುದು ಯಾವ ಕಾರಣದಿಂದ ಎನ್ನುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು?
ಕೊರೊನಾ `ಲಾಕ್ ಡೌನ್ ಸಮಯದಲ್ಲಿ’ ಬೆಂಗಳೂರಿನಲ್ಲಿ ಇದ್ದವರ ಸಂಖ್ಯೆ ಎಷ್ಟು ಎಂಬುದು ಹಲವರಿಗೆ ತಿಳಿದಿದೆ.
ಬೆಂಗಳೂರಿನಲ್ಲೇ ನೆಲೆಸಿದ್ದರೂ ಕೆಲವರ ಹೆಸರುಗಳು ಮತದಾರರ ಪಟ್ಟಿಯಿಂದ ಆಕಸ್ಮಿಕವಾಗಿಯೋ ಅಥವಾ ಇನ್ಯಾವುದೋ ಕಾರಣಗಳಿಂದ ಹೆಸರುಗಳು ಇಲ್ಲ. ಇತ್ತೀಚೆಗೆ ಓಟು ಹಾಕಿದ್ದ ಜನ ಇಂದೂ ಸಹ ಉತ್ಸಾಹದಿಂದ ಮತ ಹಾಕಲು ಬಂದಾಗ ಅವರ ಹೆಸರುಗಳು ಮಾಯವಾಗಿದೆ. ಇದಕ್ಕೆಲ್ಲಾ ಕಾರಣವೇನು…? ಸಂಬಧಪಟ್ಟವರು ಉತ್ತರ ಕೊಡುವಿರಾ?ಆಪಾದನೆ ಮಾಡುವುದಾದರೆ ಮತದಾನ ಮಾಡದ ಜನಗಳನ್ನು ಜರಿಯಿರಿ. ಸರಿಯಾದ ವ್ಯವಸ್ಥೆ ಮಾಡದವರನ್ನು ಬೈದುಬಿಡಿ. ಆದರೆ “ಬೆಂಗಳೂರು ಎಂಬ ನಮ್ಮ ಹೆಮ್ಮೆಯ ಮಹಾನಗರದ” ಮೇಲೆ ಆಪಾದನೆಯ ಸುರಿ ಮಳೆ ಹರಿಸಬೇಡಿ.
– ಡಾ. ಆರ್. ಶೈಲಜ ಶರ್ಮ