ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿರುವ ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿಗೌಡ ಪಕ್ಷ ತೊರೆಯುತ್ತಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಡಾ.ತೇಜಸ್ವಿನಿಗೌಡ ಅವರು ಆಡಿರುವ ಮಾತಿನ ಹಿಂದೆ ಇದೆಯೇ ಕಾಂಗ್ರೆಸ್ ಸೇರ್ಪಡೆಯಾಗುವ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಮತ್ತೆ ಘರ್ವಾಪ್ಸಿಗೆ ಅಣಿಯಾದ್ರಾ ಡಾ.ತೇಜಸ್ವಿನಿಗೌಡ? ಎಂಬ ಚರ್ಚೆಗೆ ಗ್ರಾಸವಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿಗೆ ಶಾಕ್ ನೀಡಲು ಸಜ್ಜಾಗುತ್ತಿದ್ದಾರೆ ತೇಜಸ್ವಿನಿಗೌಡ ಎಂಬ ಚರ್ಚೆ ಆರಂಭಗೊಂಡಿದೆ.
ನಿನ್ನೆ ಮುಕ್ತಾಯವಾದ ವಿಧಾನಮಂಡಲದ ಜಂಟಿ ಆ ಅಧಿವೇಶನದಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ವಿಧಾನಪರಿಷತ್ ಸದಸ್ಯರಿಗೆ ಗೌರವ ಸಲ್ಲಿಕೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ. ಸದನದಲ್ಲಿ ಇಷ್ಟು ದಿನ ಸೇವೆ ಸಲ್ಲಿಸಿದ್ದು, ಜೂನ್ 17 ಕ್ಕೆ ಒಟ್ಟು 16 ಸದಸ್ಯರು ನಿವೃತ್ತರಾಗುತ್ತಿದ್ದಾರೆ ಎಂದು ತಿಳಿಸಿದರು.
ಆ 16 ಮಂದಿಯ ಪಟ್ಟಿಯಲ್ಲಿ ಡಾ. ತೇಜಸ್ವಿನಿಗೌಡ ಒಬ್ಬರು. ಹೀಗಾಗಿ, ಸದನದಲ್ಲಿ ಅವರಿಗೆ ಮಾತನ್ನಾಡಲು ಅವಕಾಶ ಸಭಾಪತಿ ಬಸವರಾಜ ಹೊರಟ್ಟಿ ಕಲ್ಪಿಸಿಕೊಟ್ಟರು.ಮಾತನ್ನಾಡುವ ಸಂದರ್ಭದಲ್ಲಿ, ನನಗೆ ಅವಕಾಶ ಕಲ್ಪಿಸಿಕೊಟ್ಟ ಭಾಜಪಗೂ ಧನ್ಯವಾದಗಳು ಎಂದು ಎರಡ್ಮೂರು ಬಾರಿ ಉಲ್ಲೇಖಿಸಿದ ಡಾ. ತೇಜಸ್ವಿನಿಗೌಡ. ಕಳೆದ 20 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸದನದಲ್ಲಿ ತೇಜಸ್ವಿನಿಗೌಡ, ಹೆಚ್ಡಿಡಿ ಅವರನ್ನು ಸೋಲಿಸಿದ್ದನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಭಾಜಪ ವಿಧಾನಪರಿಷತ್ ಸದಸ್ಯೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹಾಗಾದ್ರೆ, ಏಕಾಏಕಿ ಇಂತಹ ಮಾತುಗಳನ್ನು ಆಡಿರುವ ತೇಜಸ್ವಿನಿಗೌಡ ಪಕ್ಷಕ್ಕೆ ಗುಡ್ಬೈ ಹೇಳುತ್ತಾರಾ? ಎಂಬ ಚರ್ಚೆ ಇದೀಗ ಜೋರಾಗಿದೆ. ಹೌದು ಎನ್ನುತ್ತಿದೆ ಮೂಲಗಳು.ಸದ್ಯ ಬಿಜೆಪಿಯ ವಿಧಾನಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಡಾ.ತೇಜಸ್ವಿನಿಗೌಡ ಅವರಿಗೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸಕ್ತಿಯಿದೆ.
ಆದ್ರೆ, ರಾಜ್ಯದಲ್ಲಿ ಅವರಿಗೆ ಬಿಜೆಪಿಯಿಂದ ಯಾವುದೇ ಕ್ಷೇತ್ರ ಅವರಿಗೆ ಸ್ಪರ್ಧೆಗೆ ಇಲ್ಲ. ಸದ್ಯ ಅವರು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆಯಾದ್ರೆ, ನನ್ನನ್ನು ಪರಿಗಣಿಸಿ ಎಂದು ತಿಳಿಸಿದ್ದಾರೆ.
ಅವರೊಬ್ಬ ಪತ್ರಕರ್ತರಾಗಿದ್ದು, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ನಾನು ಕೂಡ ಪತ್ರಕರ್ತೆಯಾಗಿದ್ದೆ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದೇನೆ. ಅವರಿಗೆ ಎರಡು ಬಾರಿ ಅವಕಾಶ ಕೊಟ್ಟಿದ್ದೀರಿ. ಈಗ ಅವರ ಬದಲಿಗೆ ನನಗೆ ಅವಕಾಶ ಕೊಡಿ ಎಂದು ತೇಜಸ್ವಿನಿಗೌಡ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಬಿಜೆಪಿಯಿಂದ ಈವರೆಗೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಇದನ್ನ ಅರಿತ ಕಾಂಗ್ರೆಸ್ ತೇಜಸ್ವಿನಿಗೌಡರಿಗೆ ಗಾಳ ಹಾಕಿದೆ ಎಂಬ ಮಾತುಗಳು ಜೋರಾಗಿದೆ.ಅದೇ ಮೈಸೂರು-ಕೊಡಗು ಕ್ಷೇತ್ರದಿಂದ ಡಾ.ತೇಜಸ್ವಿನಿಗೌಡ ಪಕ್ಷಕ್ಕೆ ಬರುವುದಾದ್ರೆ ಕಣಕ್ಕಿಳಿಸಲು ವೇದಿಕೆ ಸಿದ್ಧ ಎಂದು ಸೂಚಿಸಿದೆ.ಇದರ ಹಿನ್ನೆಲೆಯಲ್ಲಿ, ಕಳೆದ ಅಧಿವೇಶನದಲ್ಲಿ ತೇಜಸ್ವಿನಿಗೌಡ ಕಾಂಗ್ರೆಸ್ ವಿರುದ್ಧ ಅಷ್ಟಾಗಿ ಗುಡುಗಿಲ್ಲ. ಸಾಫ್ಟ್ ಕಾರ್ನರ್ ಆಗಿ ಮಾತನ್ನಾಡಿದ್ದಾರೆ.
ಜೊತೆಗೆ ಮುಂದಿನ ಮೂರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿದ್ದು, ಬಿಜೆಪಿ ನಿರಾಕರಣೆ ಮಾಡಿದ್ರೆ, ಅದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ನಿಂದ ಅಖಾಡಕ್ಕೆ ಧುಮುಕಲು ಸನ್ನದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಆರಂಭವಾಗಿದೆ.
ಆಗ ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಸುಲಭವಾಗಿ ಎದುರಿಸಬಹುದು ಎಂಬ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿರುವ ತೇಜಸ್ವಿನಿಗೌಡ, ನಿನ್ನೆಯ ಅಧಿವೇಶನದಲ್ಲಿ ಭಾಜಪಗೂ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಹೊಸ ಮಾರ್ಗ ಹಿಡಿದಿದ್ದಾರಾ? ಎಂಬ ಚರ್ಚೆಗಳು ಆರಂಭಗೊಂಡಿದೆ.