ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ೨ ಉಪಚುನಾವಣೆಗಳ ಮತದಾನಕ್ಕೆ ಕೇವಲ ಮೂರೇ ದಿನಗಳು ಬಾಕಿಯಿದೆ.
ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ಕಣದಲ್ಲಿರುವುದರಿಂದ ಅಬ್ಬರದ ಪ್ರಚಾರ ನಡೆದಿದೆ. ಮಧ್ಯಾಹ್ನದ ವೇಳೆಗೆ ಬಿಸಿಲೇರುತ್ತದೆ ಎಂಬ ಕಾರಣಕ್ಕಾಗಿ ಬೆಳಿಗ್ಗೆ ೬ ಗಂಟೆಯಿಂದಲೇ ಅಭ್ಯರ್ಥಿಗಳ ಅಭಿಮಾನಿಗಳು ಪ್ರಚಾರ ಶುರು ಮಾಡಿದ್ದಾರೆ.
ಪಕ್ಷಗಳ ಮುಖಂಡರು ಸಹ ತಾವೇನೂ ಕಮ್ಮಿಯಿಲ್ಲ ಎಂಬಂತೆ ಮನೆ ಮನೆಗೂ ತೆರಳಿ ತಮಗೆ ಪರಿಚಯವಿರುವವರ ಎಡೆತಾಕಿ ತಮ್ಮ ಅಭ್ಯರ್ಥಿಪರ ಮತದಾನ ಮಾಡಲು ಮನವರಿಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಮತ್ತಿತರ ಮುಖಂಡರು ವಾರ್ಡ್ ನಂ.೧ರಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಾಹ್ನ ೧೨ಗಂಟೆ ವೇಳೆಗೆ ಬಾಗಲಕೋಟೆ ವೀರಶೈವ ಮುಖಂಡರ ಸಭೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ವೀರಣ್ಣಚರಂತಿ ಮಠ ಅವರು, ತಮಗೆ ಈ ಬಾರಿ ಚುನಾವಣೆಯಲ್ಲಿ ಎಲ್ಲಿ ಪ್ರಚಾರಕ್ಕೆ ಹೋದರೂ ವ್ಯಾಪಕ ಪ್ರತಿಕ್ರಿಯೆ ನಡೆಯುತ್ತಿದೆ. ಮೂರು ವರ್ಷಗಳಿಂದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ಜನತೆ ನಮ್ಮ ಪರ ಮತ ಚಲಾಯಿಸಲಿದ್ದಾರೆ. ಹಾಗಾಗಿ ನಮ್ಮ ಗೆಲುವು ಶತಸಿದ್ಧ ಎಂದು ಹೇಳಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಇತ್ತ ದಾವಣಗೆರೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಾರಿಯ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿದ್ದೆಗೆಡೆಸಿದ್ದು, ಅತೀ ಹೆಚ್ಚು ಬಾರಿ ಉಪಚುನಾವಣಾ ಪ್ರಚಾರಕ್ಕೆ ಬಂದರೂ ಯಾವ ಕ್ಷೇತ್ರದಲ್ಲಿ ಏನು ಮಾಡಬೇಕು ಎಂಬುದು ತಿಳಿಯದಾಗಿದೆ. ದಾವಣಗೆರೆಗೆ ಬಂದರೆ ಅಹಿಂದಾಗೆ ಮತ ಹಾಕಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಹೋದರೆ ಅಲ್ಲೊಂದು ತರ ಮಾತನಾಡುತ್ತಾರೆ. ಹೀಗಾಗಿ ಅವರಿಗೆ ಈ ಚುನಾವಣೆ ನಿದ್ದೆಗೆಡೆಸಿದೆ. ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನಕ್ಕೆ ಎರಡುಮೂರು ದಿನಗಳು ಇರುವಾಗಲೇ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಜೋರಾಗಿದೆ.



