ಬಾಗಲಕೋಟೆ: ಹೆಣ್ಣುಮಗು ಎಂದು ಗರ್ಭಪಾತ ಮಾಡಿಸಿಕೊಂಡಿದ್ದ ಮಹಿಳೆಯೋರ್ವರು ಅಸ್ವಸ್ಥರಾಗಿ ಸಾವನ್ನಪ್ಪಿರುವ ಘಟನೆ, ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ನಡೆದಿದೆ.
ಮೂಲತಃ ಮಹಾರಾಷ್ಟ್ರ ಕೊಲ್ಲಾಪುರದವರೆನ್ನಲಾದ ಸೋನಾಲಿ(33) ಎಂಬುವರು ಮೃತಪಟ್ಟಿರುವ ಮಹಿಳೆಯಾಗಿದ್ದು, ಈ ಹಿಂದೆ ಅವರಿಗೆ 2 ಹೆಣ್ಣುಮಕ್ಕಳಿದ್ದು, ಇದೀಗ ಗರ್ಭವತಿಯಾದಾಗ ಮಹಾರಾಷ್ಟ್ರದಲ್ಲಿ ತಪಾಸಣೆ ಮಾಡಿಸಿದಾಗ ಮೂರನೇ ಮಗುವು ಹೆಣ್ಣು ಎಂದು ತಿಳಿದುಬಂದಿದೆ.
ಹಾಗಾಗಿ ಗರ್ಭಪಾತ ಮಾಡಿಸಲು ಮಹಾಲಿಂಗಾಪುರಕ್ಕೆ ಬಂದಿದ್ದ ಸೋನಾಲಿ ಆಸ್ಪತ್ರೆಯೊಂದರ ಮಾಜಿ ಆಯಾ ಎನ್ನಲಾದ ಕವಿತ ಬದನ್ನನವರ್ ಎಂಬುವರಿಂದ ಗರ್ಭಪಾತ ಮಾಡಿಸಿದ್ದಾರೆ. ಗರ್ಭಪಾತವಾದ ಕೂಡಲೇ ಆಕೆ ಮೂರ್ಚೆ ಹೋಗಿದ್ದಾರೆ. ಕೂಡಲೇ ಕಾರಿನಲ್ಲಿ ಕಳುಹಿಸಿಕೊಡಲಾಗಿದ್ದು, ಕಾರಿನಲ್ಲಿಯೇ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದ್ದು, ಘಟನೆ ಸಂಬಂಧ ಸಾಂಗ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.