ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ವಿವಸ್ತ್ರಗೊಳಿಸುವ ಜೊತೆಗೆ ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡದ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿದೆ. ರಾಮಪ್ಪಗೆ ಎಂಬವರಿಗೆ 1991ರಲ್ಲಿ ಸರ್ಕಾರ 3 ಎಕರೆ ಜಮೀನು ನೀಡಿತ್ತು.ಆ ಬಳಿಕದಿಂದ ರಾಮಪ್ಪ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಆದರೆ ಕೆಲ ದಿನಗಳ ಬಳಿಕ ರಾಮಪ್ಪಗೆ ಸೇರಿದ ಜಮೀನಿನ 20 ಗುಂಟೆಯನ್ನು ಒತ್ತುವರಿ ಮಾಡಿದ್ದಾರೆ. ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ವಿರುದ್ಧ ಒತ್ತುವರಿ ಆರೋಪ ಕೇಳಿಬಂದಿದೆ.ನಮಗೆ ರಾಜಕೀಯ ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಿದ್ದಾರೆ.
ಜಮೀನು ಜೊತೆ ರಸ್ತೆಗೆ ಮೀಸಲಿಟ್ಟ ಜಾಗವೂ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಪ್ರಶ್ನಿಸಲು ಹೋಗಿದ್ದ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ವಿವಸ್ತ್ರಗೊಳಿಸಿ ವಿಕೃತಿ ಮೆರೆಯುವುದರ ಜೊತೆಗೆ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿರುವ ಆರೋಪವನ್ನು ರಾಮಪ್ಪ ಮಾಡಿದ್ದಾರೆ.