ಮುಂಬೈ: ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆಯ ಆರಂಭ ಎಂದೇ ಬಿಂಬಿತವಾಗಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ಲಭಿಸಲಿದೆ.
ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.
ಚೊಚ್ಚಲ ಋತುವಿನ ಎಲ್ಲ ಪಂದ್ಯಗಳೂ ಮುಂಬೈನಲ್ಲೇ ನಡೆಯಲಿವೆ. ಡಿ.ವೈ.ಪಾಟೀಲ್ ಕ್ರೀಡಾಂಗಣ ಮತ್ತು ಬ್ರಬೋರ್ನ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಐದು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಎರಡು ನಾಕೌಟ್ ಹಣಾಹಣಿ ಸೇರಿದಂತೆ ಒಟ್ಟು 21 ಪಂದ್ಯಗಳು ನಡೆಯಲಿವೆ. ಮಾರ್ಚ್ 26 ರಂದು ಫೈನಲ್ ನಡೆಯಲಿದೆ.
ಮುಂಬೈ ತಂಡವು ಕೌರ್ ಅಲ್ಲದೆ ಇಂಗ್ಲೆಂಡ್‌ನ ನಥಾಲಿ ಸಿವೆರ್ ಬ್ರಂಟ್, ಇಸಿ ವಾಂಗ್, ನ್ಯೂಜಿಲೆಂಡ್‌ನ ಅಮೇಲಿ ಕೆರ್, ದಕ್ಷಿಣ ಆಫ್ರಿಕಾದ ಕ್ಲೋ ಟ್ರಯಾನ್ ಅವರನ್ನು ಒಳಗೊಂಡಿದೆ.
‘ಡಬ್ಲ್ಯುಪಿಎಲ್ ಟೂರ್ನಿಯು ಭಾರತದ ಆಟಗಾರ್ತಿಯರಿಗೆ ತಮ್ಮ ಪ್ರತಿಭೆ ತೋರಿಸಲು ಉತ್ತಮ ವೇದಿಕೆ ಎನಿಸಿದೆ. ಲೀಗ್‌ನ ಆರಂಭಕ್ಕೆ ಹಲವು ಸಮಯಗಳಿಂದ ಕಾಯುತ್ತಿದ್ದೆವು’ ಎಂದು ಕೌರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಬೆಥ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡವು ಹರ್ಲೀನ್ ಡಿಯೊಲ್, ಸ್ನೇಹಾ ರಾಣಾ ಮತ್ತು ಸುಷ್ಮಾ ವರ್ಮಾ ಅವರನ್ನು ಒಳಗೊಂಡಿದೆ. ಮೂನಿ ಅಲ್ಲದೆ ಆಶ್ಲಿ ಗಾರ್ಡನರ್, ಜಾರ್ಜಿಯಾ ವೇರ್‌ಹಂ ಮತ್ತು ಸೋಫಿ ಡಂಕ್ಲಿ ಅವರು ಈ ತಂಡದಲ್ಲಿರುವ ಪ್ರಮುಖ ವಿದೇಶಿ ಆಟಗಾರ್ತಿಯರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ತನ್ನ ಮೊದಲ ಪಂದ್ಯ ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡವನ್ನು ಸ್ಮೃತಿ ಮಂದಾನ ಮುನ್ನಡೆಸಲಿದ್ದಾರೆ. ಡಬ್ಲ್ಯುಪಿಎಲ್ ಹರಾಜಿನಲ್ಲಿ ಸ್ಮೃತಿ ಅವರು ಅತ್ಯಧಿಕ ಮೌಲ್ಯ ಪಡೆದ ಆಟಗಾರ್ತಿ ಎನಿಸಿಕೊಂಡಿದ್ದರು.
ಹರಾಜಿನಲ್ಲಿ ಐದು ಫ್ರಾಂಚೈಸಿಗಳು ಒಟ್ಟು 59.50 ಕೋಟಿ ಖರ್ಚು ಮಾಡಿದ್ದವು. ಈ ಬಾರಿ ಐದು ತಂಡಗಳಲ್ಲಿ 87 ಆಟಗಾರ್ತಿಯರು ಅವಕಾಶ ಪಡೆದುಕೊಂಡಿದ್ದಾರೆ.
Leave a Review