ಮುಂಬೈ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನ ನಿರಾಶಾದಾಯಕವಾಗಿದೆ. ಆದರೆ ಇತ್ತೀಚಿನ ವಿವಿಧ ಟೂರ್ನಿಗಳಲ್ಲಿ ಭಾರತದ ಆಟಗಾರ್ತಿಯರು ಸುಧಾರಿತ ಪ್ರದರ್ಶನ ನೀಡಿದ್ದಾರೆ. ಆ ಆತ್ಮವಿಶ್ವಾಸದಿಂದ ಬುಧವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಕಣಕ್ಕಿಳಿಯಲಿದೆ.
ಈ ವರ್ಷ ಚುಟುಕು ಕ್ರಿಕೆಟ್ ಸರಣಿಯಲ್ಲಿ ಹರ್ಮನ್ಪ್ರೀತ್ ಕೌರ್ ಬಳಗ ಯಶಸ್ಸು ಕಂಡಿದೆ. ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಕೊರಳಿಗೆ ಹಾಕಿಕೊಂಡಿದೆ. ಬಾಂಗ್ಲಾದೇಶ ತಂಡವನ್ನು ಅದರ ತವರಿನಲ್ಲಿ 2-1 ರಿಂದ ಸೋಲಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ (ವೆಸ್ಟ್ ಇಂಡೀಸ್ ಇನ್ನೊಂದು ತಂಡ) ಫೈನಲ್ ತಲುಪಿದೆ. ಇನ್ನೊಂದೆಡೆ ವಿಶ್ವದ ಎರಡನೇ ಕ್ರಮಾಂಕದ ಇಂಗ್ಲೆಂಡ್ ತವರಿನಲ್ಲಿ ಶ್ರಿಲಂಕಾ ಎದುರಿನ ಸರಣಿಯಲ್ಲಿ 1-2 ರಲ್ಲಿ ಅನಿರೀಕ್ಷಿತ ಸೋಲನ್ನು ಕಂಡಿದೆ.
ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ಎದುರು ಉತ್ತಮ ದಾಖಲೆ ಹೊಂದಿಲ್ಲ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಎರಡು ಮಾತ್ರ. ಕೊನೆಯ ಬಾರಿ ಜಯಗಳಿಸಿದ್ದು 2018ರಷ್ಟು (ಮಾರ್ಚ್) ಹಿಂದೆ.
ಒಟ್ಟಾರೆ ಈ ತಂಡಗಳು 27 ಬಾರಿ ಮುಖಾಮುಖಿ ಆಗಿದ್ದು, ಭಾರತ ಏಳು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಸಾಲದ್ದಕ್ಕೆ ಭಾರತ ಲಖನೌದಲ್ಲಿ ದಕ್ಷಿಣ ಆಫ್ರಿಕಾ ಎದುರು (2021ರ ಮಾರ್ಚ್) ಗೆದ್ದ ನಂತರ ತವರಿನಲ್ಲಿ ಒಂದೂ ಟಿ-20 ಪಂದ್ಯ ಗೆದ್ದಿಲ್ಲ. ಈಗ ಇದನ್ನೆಲ್ಲಾ ಮರೆತು ಸುಧಾರಿತ ಪ್ರದರ್ಶನ ನೀಡುವ ಅವಕಾಶ ಭಾರತಕ್ಕೆ ಒದಗಿದೆ.
ಪಂದ್ಯ ಆರಂಭ: ರಾತ್ರಿ 7 ಗಂಟೆಗೆ