ಬೇಲೂರು: ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಹಲವು ಕ್ರಿಯಾಶೀಲ ಚಟುವಟಿಕೆಗಳನ್ನು ಕೈಗೊಂಡು ತಲಾ 30 ರಂತೆ 120 ವಿದ್ಯಾರ್ಥಿಗಳಿಗೆ ತಾಲೂಕಿನ 4 ವಸತಿ ಶಾಲೆಗಳಲ್ಲಿ ನಿಧಾನ ಕಲಿಕೆಯ ಮಕ್ಕಳಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ ನಾರಾಯಣ್ ಹೇಳಿದರು.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಿಧಾನ ಕಲಿಕೆಯ ಮಕ್ಕಳಿಗೆ ಆಯೋಜಿಸಲಾಗಿದ್ದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕೇವಲ 20 ಮಕ್ಕಳು ಉತ್ತೀರ್ಣರಾಗಿದ್ದರೆ ನಮ್ಮ ತಾಲೂಕಿಗೆ 4ನೇ ಸ್ಥಾನ ಲಭ್ಯವಾಗುತ್ತಿತ್ತು.
ಈ ಅಂಶವನ್ನು ಮನಗಂಡು ನಿಧಾನ ಕಲಿಕೆಯ ಈ ಕಾರ್ಯಗಾರವನ್ನು ಆಯೋಜಿಸಿದ್ದೇವೆ. ತಾಲೂಕಿನ ಎಲ್ಲಾ ವಸತಿ ಶಾಲೆಯ ಪ್ರಾಂಶುಪಾಲರು ಉತ್ತಮವಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಬೆಳಗಿನ ಅವಧಿ ಭಾಷಾ ವಿಷಯದಲ್ಲಿ ಬರವಣಿಗೆ ಹಾಗೂ ಅಪರಾಹ್ನ ಕೋರ್ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮವಿದ್ದು ಫಲಿತಾಂಶ ಸುಧಾರಣೆಗೆ ಉಪಯುಕ್ತವಾದ ಕಾರ್ಯಾಗಾರ ಇದಾಗಿದೆ ಎಂದರು.ಈ ವೇಳೆ ಶಿಕ್ಷಣ ಸಂಯೋಜಕರು, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.