ನೆಲಮಂಗಲ: “ಕೃತಾ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳನ್ನು ಗಮನಿಸಿದಾಗ, ಯುಗದಿಂದ ಯುಗಕ್ಕೆ ಮೌಲ್ಯಗಳ ಕುಸಿತವನ್ನು ಕಾಣಬಹುದು. ಹಾಗೆಯೇ ಒಂದು ಕಾಲದಲ್ಲಿ ಇದ್ದ ನಿರ್ಭೀತ ಪತ್ರಿಕೋದ್ಯಮವಿಂದು ಕೆಲವರಿಂದ ಪೀತ ಪತ್ರಿಕೋದ್ಯಮವಾಗಿ, ಪ್ರೇತ ಪತ್ರಿಕೋದ್ಯಮವಾಗಿ, ಜೀತ ಪತ್ರಿಕೋದ್ಯಮವು ಆಗಿಹೋಗಿರುವುದು ಖೇದಕರ” ಎಂದು ಲೇಖಕ ಮತ್ತು ಅಂಕಣಕಾರ ಮಣ್ಣೆ ಮೋಹನ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಪತ್ರಿಕೆಗಳು ಪ್ರಾದೇಶಿಕವಾಗಿ ಹೊರ ಬರಬಹುದು. ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು.
ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು. ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಪತ್ರಕರ್ತರು ವಿಶ್ವಾಸಾರ್ಹತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ವೃತ್ತಿಗೆ ಗೌರವ ಹೆಚ್ಚಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಮಾಜಪರ ಕಾಳಜಿ ಹಾಗೂ ಆಶಯಗಳನ್ನು ಮತ್ತೆ ಅಳವಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸು ಮಾಡಲು ಪತ್ರಕರ್ತರು ಒಂದಾಗಬೇಕು” ಎಂದರು.”ರಾಜ್ಯದಲ್ಲಿರುವ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಯನ್ನು ಸಹ ನಡೆಸಿದ್ದೆವು. ಈಗಾಗಲೇ ನಮ್ಮ ಸಮಸ್ಯೆಯನ್ನು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
ಜನವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್, ಸಿಎಂ ಸಿದ್ದರಾಮಯ್ಯ ವಿರುದ್ಧ ಪಿಐಎಲ್ ಸೇರಿದಂತೆ, ಮಾನ್ಯತಾ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ವಾರ್ತಾ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ರಾಜ್ಯದಲ್ಲಿ 800ಕ್ಕೂ ಅಧಿಕ ಪತ್ರಿಕೆಗಳು ಮಾನ್ಯತೆ ಪಡೆದಿದ್ದು, ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಆಗಿಲ್ಲ.
ಈ ರೀತಿ ನೋಂದಣಿ ಅಗದ ಕಾರಣ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು.ರಾಜ್ಯ ಸರ್ಕಾರದಿಂದ ಪತ್ರಕರ್ತರು ಪಡೆಯಬೇಕಾದ ಸವಲತ್ತುಗಳನ್ನು ಪಡೆಯಲು ಎಲ್ಲಾ ಸಂಘಟನೆಗಳು ಒಂದಾಗಬೇಕು ಎಂದು ಕಾನಿಪ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷ್ಮಣ್ ರಾವ್, ಸಾಹಿತಿ ಮಣ್ಣೆ ಮೋಹನ್, ನೆಲಮಂಗಲ ಕಸಾಪ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಕಾನಿಪ ಜಿಲ್ಲಾಧ್ಯಕ್ಷರಾದ ವೀರಸಾಗರ ಭಾನುಪ್ರಕಾಶ್, ಉಪಾಧ್ಯಕ್ಷರಾದ ಚೌಡೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಮಹೇಶ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿದ್ದರಾಜು, ನೆಲಮಂಗಲ ತಾಲೂಕು ಅಧ್ಯಕ್ಷರಾದ ಗುರುಪ್ರಸಾದ್, ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಟಿ ಜಿ ಗಂಗಾಧರ್, ಹೊಸಕೋಟೆ ಅಧ್ಯಕ್ಷರಾದ ಅಶ್ವಥ್, ದೇವನಹಳ್ಳಿ ಅಧ್ಯಕ್ಷರಾದ ರಾಜು ಅಗಸ್ತ್ಯ, ಯಲಹಂಕ ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಗೌರವಾಧ್ಯಕ್ಷ ಸಿದ್ದರಾಜು, ಕಾರ್ಯಾಧ್ಯಕ್ಷ ಎನ್. ಕೆ. ರಾಜು ಮತ್ತು ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.