ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಗೌಡ ಅವರು ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ಬಹಳ ಹದಗೆಟ್ಟಿದೆ. ಶಿಕ್ಷಕರು ಸಹ ಆತಂಕದಲ್ಲೇ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಶಿಕ್ಷಣ ವೃತ್ತಿ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜೂ. 3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೊಮ್ಮೆ ಶಿಕ್ಷಕರನ್ನು ನನ್ನನ್ನು ಬೆಂಬಲಿಸುವ ಮೂಲಕ ಗೆಲ್ಲಿಸುವ ವಿಶ್ವಾಸ ತಮಗಿದೆ. ನಾನು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದ ಬಳಿಕ ಶಿಕ್ಷಕರು ನೆಮ್ಮದಿಯಿಂದ ಕಾರ್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಲು ಶ್ರಮಿಸುತ್ತೇನೆ ಎಂದರು.
ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರ 7 ವೇತನ ಆಯೋಗದ ವರದಿ ಜಾರಿ, ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿ, ಶಿಕ್ಷಕರಿಗೆ ಆರೋಗ್ಯ ಕಾರ್ಡ್ ಒದಗಿಸುವ ಕಾರ್ಯ ಮಾಡುವ ಗುರಿ ಹೊಂದಿರುವುದಾಗಿ ಅವರು ಹೇಳಿದರು.ಕಾಂಗ್ರೆಸ್ನವರು ಏನೇ ಆಸೆ, ಆಮೀಷವೊಡ್ಡಿದರೂ, ಏನೇ ಕುತಂತ್ರ ಮಾಡಿದರೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲ್ಲಲ್ಲು ಸಾಧ್ಯವಿಲ್ಲ. ಈ ಕ್ಷೇತ್ರದ 5 ಜಿಲ್ಲೆಗಳ 34 ತಾಲ್ಲೂಕುಗಳಲ್ಲೂ ವಾತಾವರಣ ನಮ್ಮ ಪರ ಇದೆ. ನೂರಕ್ಕೆ ನೂರು ಪಾಲು ಗೆಲ್ಲುವ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ್ದೇನೆ ಎಂದರು.
ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡುವ ಮೂಲಕ ಶಿಕ್ಷಕರೇ ಗೆಲ್ಲಲಿದ್ದಾರೆ. ಈ ಮೂಲಕ ಒಳ್ಳೆಯ ಸಮಾಜ ಕಟ್ಟಲು ಶಿಕ್ಷಕರು ಅನುವು ಮಾಡಿಕೊಡಬೇಕು ಎಂದರು. ಕ್ಷೇತ್ರದಾದ್ಯಂತ ಸಂಚರಿಸಿ ದಾಗ ಶಿಕ್ಷಕರು ನಮ್ಮ ಸೇವೆಯನ್ನು ಪ್ರೀತಿಯಿಂದ ಸ್ವೀಕಾರ ಮಾಡಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸುವ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ನನ್ನ ಗೆಲುವು ಖಚಿತ ಎಂದರು.
ನಾನು ಕಳೆದ 20 ವರ್ಷಗಳಿಂದಲೂ ಸಿದ್ದಗಂಗಾ ಮಠ ಭಕ್ತನಾಗಿದ್ದೇನೆ. ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರ ಆಶೀರ್ವಾದ ಪಡೆದಿದ್ದೇನೆ. ನನಗೆ ಗುರುಗಳ ಆಶೀರ್ವಾದ ಸಿಕ್ಕಿದೆ ಎಂದರು.ಶಾಸಕ ಜ್ಯೋತಿಗಣೇಶ್ ಮಾತನಾಡಿ, ಈಗಾಗಲೇ ಶಿಕ್ಷಕರ ಸಮಸ್ಯೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವ ವೈ.ಎ. ನಾರಾಯಣಸ್ವಾಮಿ ಅವರನ್ನು ಜೂ. 3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ, ಕೆ.ಎಸ್. ಉಮಾಮಹೇಶ್ ಮತ್ತಿತರರು ಉಪಸ್ಥಿತರಿದ್ದರು.