ಗದಗ: ಕಟೌಟು ಕಟ್ಟುವ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಪಟ್ಟಂತೆ ನಟ ಯಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರನ್ನು ಮಾತನಾಡಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಮೃತಪಟ್ಟ ದುರ್ದೈವಿಗಳು. ಯಶ್ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಲು ಇವರು ಸಿದ್ಧತೆ ಮಾಡಿಕೊಂಡಿದ್ದರು. ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿದೆ. ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಎಂಬ ಆಗ್ರಹ ಕೇಳಿ ಬಂದಿದೆ. `ಯಶ್ ನಮ್ಮೂರಿಗೆ ಬರಬೇಕು. ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು’ ಎಂದು ಮೃತ ಯುವಕರ ಗೆಳೆಯ ಪ್ರಕಾಶ ಮ್ಯಾಗೇರಿ ಆಗ್ರಹಿಸಿದ್ದಾರೆ.
ಯಶ್ ಅವರು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಬರ್ತ್ಡೇ ದಿನ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಇಂದು ಅಭಿಮಾನಿಗಳನ್ನು ಭೇಟಿ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಯಶ್ ಅವರ ಕಡೆಯಿಂದ ಕೊನೆಯಪಕ್ಷ ಒಂದು ಟ್ವೀಟ್ ಆದರೂ ಬರಲಿ ಎಂದು ಅನೇಕರು ಕೋರಿದ್ದಾರೆ.