ಪಾಕಿಸ್ತಾನ ತಂಡ ಈ ಬಾರಿ ಟಿ20 ವಿಶ್ವಕಪ್ 2026 ಟೂರ್ನಿಯ ಸೂಪರ್ 8 ಹಂತದಿAದ ಹೊರಬಿದ್ದು ಮುಖಭಂಗಕ್ಕೀಡಾಯಿತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಂಡದ ಆಟಗಾರರ ಕಳಪೆ ಪ್ರದರ್ಶನಕ್ಕಾಗಿ 50 ಲಕ್ಷ ರೂಪಾಯಿ ದಂಡ ವಿಧಿಸಲು ಯೋಜಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಸಹ ಆಗಿತ್ತು. ಈ ಬಗ್ಗೆ ಪಿಸಿಬಿ ಇದೀಗ ಪ್ರತಿಕ್ರಿಯಿಸಿದ್ದು ಇದು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಹಿಂದೂಸ್ತಾನ್ ಟೈಂಸ್ ಜೊತೆಗೆ ಮಾತನಾಡಿರುವ ಪಿಸಿಬಿ ವಕ್ತಾರ ಅಮೀರ್ ಮಿರ್ ಆಟಗಾರರಿಗೆ ದಂಡ ವಿಧಿಸಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಪಿಸಿಬಿ ವಕ್ತಾರ ಅಮೀರ್ ಮಿರ್, ಆಟಗಾರರಿಗೆ ದಂಡ ವಿಧಿಸಲಾಗಿದೆ ಎಂಬ ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು, ಇದನ್ನು ಸಾಮಾಜಿಕ ಮಾಧ್ಯಮ ಗಾಸಿಪ್ ಎಂದು ಲೇಬಲ್ ಮಾಡಿದ್ದಾರೆ. “ಪಿಸಿಬಿ ಅಂತಹ ಯಾವುದೇ ನಿರ್ಧಾರವನ್ನು ಎಂದಿಗೂ ತೆಗೆದುಕೊಂಡಿಲ್ಲ. ಇದೆಲ್ಲವೂ ಸಾಮಾಜಿಕ ಜಾಲಜಾಣಗಳಲ್ಲಿ ಹರಡಿದ ವದಂತಿಯಷ್ಟೇ. ಅಂತಹ ಯಾವುದೇ ಪೂರ್ವಭಾವಿ ಚಿಂತನೆ ಅಥವಾ ನಿಬಂಧನೆ ಇಲ್ಲ” ಎಂದು ಮಾಹಿತಿ ನೀಡಿದರು. ಹೀಗಾಗಿ ಈ ವಿಚಾರವಾಗಿ ಇದ್ದ ಗೊಂದಲ ಇದೀಗ ದೂರವಾಗಿದೆ.
2026 ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಬಹಳ ಪ್ರದರ್ಶನ ನೀಡಿತ್ತು. ಎ ಬಣದಲ್ಲಿದ್ದ ಪಾಕಿಸ್ತಾನ ತಂಡ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪರಾಭವಗೊಂಡಿತ್ತು. ಆದರೆ ಬಣದ ಇತರ ತಂಡಗಳಾಗ ಅಮೆರಿಕ, ನೆದರ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಗೆಲುವು ಸಾಧಿಸಿ ಸೂಪರ್ 8 ಹಂತಕ್ಕೆ ತೇರ್ಗಡೆಗೊಂಡಿತು. ಸೂಪರ್ 8 ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಇತ್ತಂಡಗಳಿಗೂ ಒಂದು ಅಂಕ ಸಮನಾಗಿ ಹಂಚಲಾಗಿತ್ತು.
ಪಾಕಿಸ್ತಾನ ತಂಡದ ಆಟಗಾರರ ಬೇಜವಾಬ್ದಾರಿಗೆಪಿಸಿಬಿಯು ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿದ್ದಾಗಿ ಆಗ ವರದಿಯಾಗಿತ್ತು. ಇದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದರು. ಪಿಸಿಬಿಯ ನಿಲುವು ಸರಿ ಇಲ್ಲ ಎಂದು ಟೀಕಿಸಿದ್ದರು. ಆಗ ಪಿಸಿಬಿಯು ಮೌನವಾಗಿದ್ದುದನ್ನು ಅದರ ಸಮ್ಮತಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಸಂಗತಿ ನಡೆದು ಇಷ್ಟು ದಿನಗಳ ಬಳಿಕ ಹಾಗೊಂದು ವಿಷಯ ನಡೆದೇ ಇಲ್ಲ ಎಂದು ಹೇಳುವ ಮೂಲಕ ಪಿಸಿಬಿ ವಿವಾದಕ್ಕೆ ತೆರೆ ಎಳೆದಿದೆ.
ಪಾಕ್ ತಂಡದ ಟಿ20 ವಿಶ್ವಕಪ್ ಸೋಲಿಗೆ ತಲಾ 50 ಲಕ್ಷ ರೂ ದಂಡ ಹಾಕಿದ್ದು ಹೌದಾ?



