ಬೆಂಗಳೂರು: ಯೋಗವನ್ನು ಒಂದು ದಿನ ಮಾಡಿದರೆ ಸಾಲದು; ದಿನನಿತ್ಯ ನಮ್ಮ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಾವು ಆರೋಗ್ಯ ಕಾಪಾಡಿಕೊಂಡು ಮಾನಸಿಕ ನೆಮ್ಮದಿಯಿಂದ ಬದುಕಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಯೋಗಾಸನ ಪೂರ್ವಭಾವಿ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗವು ಸುಮಾರು 6 ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದೆ ಎಂದು ವಿವರಿಸಿದರು.
ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲ; ವಿಶ್ವಸಂಸ್ಥೆ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲೂ ಸಹ ಯೋಗ ದಿನದ ಆಚರಣೆ ನಡೆಯುತ್ತದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನ ಮಾಡಲು ಅದರ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.
ಆಧುನಿಕ ಯುಗದಲ್ಲಿ ಮನುಷ್ಯ- ಮನುಷ್ಯರ ನಡುವೆ ಸಂಬಂಧಗಳು ನಶಿಸಿ ಹೋಗುವ ಈ ಸಂದರ್ಭದಲ್ಲಿ, ದೈಹಿಕ- ಮಾನಸಿಕವಾಗಿ ಪರದಾಡುತ್ತಿರುವ ಮಾನವ, ನಮ್ಮ ಸಮಸ್ಯೆಗಳಿಂದ ಹೊರಕ್ಕೆ ಬರಲು ಯೋಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.ಸಾಗರದಾಚೆಗೂ, ಅಲ್ಲಿನ ಜನರಿಗೂ ಈ ಯೋಗದ ಅನುಕೂಲ ತಲುಪಬೇಕು, ಮನುಕುಲ ಉದ್ಧಾರ ಆಗಬೇಕು, ಈ ಭೂಮಿ ಮೇಲೆ ಶಾಂತಿ ನೆಲೆಸಬೇಕು ಮತ್ತು ಮನುಷ್ಯರು ದೈಹಿಕ- ಮಾನಸಿಕ ಆರೋಗ್ಯವಂತರಾಗಿ ಬದುಕುಬೇಕೆಂಬ ದೂರದೃಷ್ಟಿಯಿಂದ ಮೋದಿಯವರು ಇದನ್ನು ವಿಶ್ವದ ಇತರ ದೇಶಗಳಿಗೂ ತಲುಪಿಸಿದ್ದಾರೆ. ಯೋಗ ದಿನವನ್ನು ದೊಡ್ಡಮಟ್ಟದಲ್ಲಿ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ನುಡಿದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ಯೋಗವು ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ. ಮೋದಿಜೀ ಅವರ ಈ ಕೊಡುಗೆಗೆ ವಿಶ್ವದ ಮೆಚ್ಚುಗೆ ಲಭಿಸಿದೆ ಎಂದು ತಿಳಿಸಿದರು.ಯೋಗವು ಪ್ರತಿಯೊಬ್ಬರ ಬದುಕಿಗೂ ಒಂದು ಆಶಾಕಿರಣ ಮತ್ತು ಭರವಸೆ ಎಂದ ಅವರು, ಯೋಗವನ್ನು ಬಲವಾಗಿ ನಂಬಿ ಪ್ರತಿಯೊಂದು ವಿಚಾರವನ್ನೂ ತಿಳಿದುಕೊಂಡು ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಚಲನಚಿತ್ರ ನಟ ಮತ್ತು ನಿರ್ದೇಶಕ ವಿಕ್ಕಿ ವರುಣ್ ಅವರು ಮಾತನಾಡಿ, ಯೋಗದ ಮೂಲಕ ನಿಸರ್ಗದ ಜೊತೆ ಬೆರೆಯುವ ಅನುಭವ ಅನನ್ಯವಾದುದು. ಕೆಲಸದ ಒತ್ತಡ, ಜಂಜಡಗಳ ನಡುವೆ ಶಾಂತಿಯಿಂದ ನಿರ್ಧಾರ ತೆಗೆದುಕೊಳ್ಳಲು ಯೋಗವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಶ್ ಗೌಡ, ಶ್ರೀಮತಿ ಲಕ್ಷ್ಮಿ ಅಶ್ವಿನಿ ಗೌಡ, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಿ, ವಿಧಾನ ಪರಿಷತ್ತಿನ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುರಭಿ ಹೊದಿಗೆರೆ ಕಾರ್ಯಕ್ರಮ ನಿರೂಪಿಸಿದರು. ಯೋಗಾಸನಗಳನ್ನು ನಡೆಸಿಕೊಡಲು ಹರ್ಷ ಮತ್ತು ಮಂಜುನಾಥ್ ಅವರು ಮಾರ್ಗದರ್ಶನ ನೀಡಿದರು.