ಕನಕಪುರ: ಮನುಷ್ಯನ ಜೀವನದಲ್ಲಿ ಆರೋಗ್ಯವಂತ ಜೀವನ ನಡೆಸಲು ಯೋಗಾಸನ ಒಂದು ಉತ್ತಮ ಔಷದಿಯಾಗಿದೆ ಎಂದು ನಿವೃತ್ತ ಎ ಎಸ್.ಐ ಪ್ರಭುಸ್ವಾಮಿ ತಿಳಿಸಿದರು.
ನಗರದ ಪ್ರಸಿದ್ಧ ಅಡ್ವೆಂಚರ್ ಅಥ್ಲೆಟಿಕ್ಸ್ ಅಕಾಡೆಮಿಯ ಹಾರೋಹಳ್ಳಿ ಶಾಖೆಯಲ್ಲಿ ಆಯೋಜಿಸಿದ್ದ ಒಂದು ದಿನದ ಯೋಗ ತರಬೇತಿ ಶಿಬಿರ ದಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಯೋಗಭ್ಯಾಸದ ಮಹತ್ವ ಹಾಗೂ ಅರಿವನ್ನು ಮೂಡಿಸಿ ಮಾತನಾಡಿದ ಅವರು ಇಂದಿನ ಯಾಂತ್ರಿಕ ಹಾಗೂ ಒತ್ತಡದ ಜೀವನದಿಂದ ಮನುಷ್ಯ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಇಲ್ಲದಂತಾಗಿದ್ದು ಇದರಿಂದ ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನುಷ್ಯನ ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನದ ಲ್ಲಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ,ಮಕ್ಕಳಲ್ಲಿ ಕ್ರೀಡೆಯ ಜೊತೆಗೆ ಮಾನಸಿಕ ಒತ್ತಡ, ಆಯಾಸ ಮತ್ತು ನಕಾರತ್ಮಕ ಭಾವನೆ ಗಳಾದ ಕೋಪ, ಆಶಾಭಂಗತೆ ಮತ್ತು ಖಿನ್ನತೆಯನ್ನು ದೂರ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಯೋಗಾಸನ ಒಂದು ಉತ್ತಮ ವಾದ ಮಾರ್ಗವಾಗಿರುವುದರಿಂದ ಪ್ರತಿನಿತ್ಯ ಕನಿಷ್ಠ ಸಮಯ ಯೋಗಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.ಅಡ್ವೆಂಚರ್ ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತಿದಾರ ಹರ್ಷ, ಹಾರೋಹಳ್ಳಿ ಭಾಗದ ಪೋಷಕರು ಸೇರಿದಂತೆ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.