ರಾಮನಗರ: ಸಮಾಜದಲ್ಲಿ ಜನರು ನಿಮ್ಮನ್ನು ಗುರ್ತಿಸಿದಾಗ ಮಾತ್ರ ನೀವು ಉತ್ತಮ ನಾಯಕರಾಗುತ್ತೀರಿ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.ತಾಲೂಕಿನ ಪಾದರಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಕಲ್ಪ ತರಬೇತಿ ಶಿಬಿರದ ಎರಡನೇ ದಿನದಂದು ಭಾಗವಹಿಸಿ ಅವರು ಮಾತನಾಡಿದರು.
ರಾಜಕಾರಣಕ್ಕೆ ಬರುವ ಹಂಬಲ ಅಧಿಕಾರ ಬೇಕೆಂಬ ಹಂಬಲ ಬಹಳ ಜನರಲ್ಲಿ ಸಾಮಾನ್ಯ ವಾಗಿದೆ. ಆದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ನಿಮ್ಮಲ್ಲಿ ಇದ್ದು ಆತ್ಮ ಸಾಕ್ಷಿಗೆ ತಕ್ಕಂತೆ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ರಾಜಕಾರಣದಲ್ಲಿ ನಾಯಕರಾಗಲು ಸಾಧ್ಯ. ಜನರ, ಗ್ರಾಮದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡು ಸಕಾರಾತ್ಮಕ ಸ್ಪಂದನೆ ನಿಮ್ಮಲ್ಲಿ ಇದ್ದಾಗ ಮಾತ್ರ ಉತ್ತಮ ನಾಯಕರಾಗಲು ಸಾಧ್ಯ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಪಡೆದ ಅದ್ಯಕ್ಷಗಿರಿ ಎಂಬುದು ಮುಳ್ಳಿನ ಹಾಸಿಗೆ, ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಗುರುಪ್ರಸಾದ್ ನೂತನವಾಗಿ ಆಯ್ಕೆಯಾಗಿ ತರಬೇತಿ ಶಿಬಿರ ಆಯೋಜಿಸಿ ಒಂದು ಒಗ್ಗಟ್ಟಿನ ಸಮ್ಮಿಲನ ಮಾಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಯುವಕರು ತಮ್ಮಲ್ಲಿ ಉತ್ತಮ ಮನಸ್ಥಿತಿ ಮತ್ತು ಗುರಿಗಳೆರಡು ಇದ್ದಾಗ ಮಾತ್ರ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಆಯೋಜಿಸಿರುವ ಶಿಬಿರವು ತಮ್ಮಲ್ಲಿ ಜ್ಞಾನ, ಇತಿಹಾಸ, ಅನುಭವಗಳನ್ನು ತಿಳಿದುಕೊಂಡು ಮೆಲುಕು ಹಾಕಲು ನೆರವಾಗಲಿದ್ದು, ಇಂತಹ ಶಿಬಿರಗಳಿಂದ ಯುವಕರಲ್ಲಿ ಆತ್ಮ ವಿಶ್ವಾಸ ಹೆಚ್ಚಿ ನಾಯಕರ ಗುಣ ಲಕ್ಷಣಗಳನ್ನು ಅಳವಡಿಸಿಕೊಳ್ಳಲು ನೆರವಾಗಲಿದೆ.
ಯುವಕರು ರಾಜಕೀಯ ಹೊರತು ಪಡಿಸಿ ಎಲ್ಲರನ್ನು ಒಟ್ಟುಗೂಡಿಸಿ ಕೊಂಡು ಹೋಗುವ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಪಕ್ಷದ ಕಾರ್ಯಕ್ರಮಗಳಾದ ಉಳುವವನೇ ಭೂಮಿಯ ಒಡೆಯ, ವಿದ್ಯುತ್ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆ, ವಸತಿ ಹಂಚಿಕೆ ಸೇರಿದಂತೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳನ್ನು ಜನರಿಗೆ ತಿಳಿಸುವ ಕೆಲಸಮಾಡಿ ಎಂದು ಕಿವಿ ಮಾತು ಹೇಳಿದರು.
ಭಾರತ ದೇಶದ ಯುವ ಶಕ್ತಿಗೆ ಉತ್ತಮ ಭವಿಷ್ಯವಿದೆ. ವಿಶ್ವದ ಎಲ್ಲ ವಲಯಗಳ ಪ್ರಮುಖ ಸ್ಥಾನಗಳಲ್ಲಿ ಭಾರತೀಯ ಯುವಕರು ಸ್ಥಾನ ಪಡೆದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಅದರಿಂದಲೇ ವಿಶ್ವದ ಗಮನ ಭಾರತದತ್ತ ನೋಡುವಂತಿದೆ ಎಂದರು.ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದಾಗ ಎಲ್ಲ ವರ್ಗದವರಿಗೆ ಅನ್ಯಾಯವಾಗ ದಂತೆ ಸರ್ವರೂ ಸಮಾನರು ಎಂಬುದನ್ನು ಗಮನದಲ್ಲಿ ಟ್ಟುಕೊಂಡು ನೀತಿಗಳನ್ನು ರೂಪಿಸ ಲಾಗುತ್ತಿತ್ತು.
ಅದರೆ ಇತ್ತೀಚಿನ ವ್ಯವಸ್ಥೆ ಬಿಕ್ಷುಕನಿಗೂ ಹೂರೆಯಾಗುವಂತ ನೀತಿಗಳು ಜನರನ್ನು ನಿದ್ದೆಗೆಡಿಸುತ್ತಿವೆ ಎಂದು ಅಸಮಾಧಾನ ವ್ಗಕ್ತಪಡಿಸಿದ ಅವರು ದೇಶದ ಪ್ರಧಾನಿಯಾಗುವ ಶಕ್ತಿ ರಾಹುಲ್ ಗಾಂಧಿಗಿದೆ. ದೇಶವನ್ನು ಒಗ್ಗೂಡಿಸುವ ಮೂಲಕ ಏಕತೆ ಮತ್ತು ಸಮಗ್ರತೆಗಾಗಿ 3500 ಕಿ.ಮೀ ಭಾರತ್ ಜೋಡೋ ಯಾತ್ರೆ ಮಾಡಿದರು. ಆದರೆ ವಿರೋಧ ಪಕ್ಷಗಳು ಅವರನ್ನು ಟೀಕಿಸಿ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಯಾಗಲಿದೆ. ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜನಪರ ಕಾರ್ಯ ಕ್ರಮಗಳನ್ನು ಮೆಲುಕು ಹಾಕಿ ಯುವಕರಿಗೆ ಸ್ಪೂರ್ತಿ ತುಂಬಿದರು.
ಜಿಲ್ಲಾ ಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಮುಖಂಡ ಡಿ.ಎಂ.ವಿಶ್ವನಾಥ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವು, ಉಪಾಧ್ಯಕ್ಷ ಎರೇಹಳ್ಳಿ ಮಂಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ಬ್ಲಾಕ್ ಅಧ್ಯಕ್ಷರುಗಳಾದ ಎ.ಬಿ.ಚೇತನ್ ಕುಮಾರ್, ನಟರಾಜು, ದಿಶಾ ಸದಸ್ಯೆ ಕಾವ್ಯ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನ್ನನ್, ಕಾರ್ಯದರ್ಶಿ ಕೃಷ್ಣ, ಯುವ ಕಾಂಗ್ರೆಸ್ ಮಂಗಳೂರು ಜಿಲ್ಲಾಧ್ಯಕ್ಷ ಲುಕ್ಮನ್, ಬ್ಲಾಕ್ ಅಧ್ಯಕ್ಷರುಗಳಾದ ಸಂದೀಪ್, ಶರತ್, ಶಿವಕುಮಾರ್, ಮುರುಳಿ, ವಿನಯ್, ಪ್ರವೀಣ್, ಸಿದ್ದೇಗೌಡ, ಮಹದೇವಯ್ಯ.ಆರ್ ಗ್ರಾಪಂ ಸದಸ್ಯ ಸತೀಶ್, ಸೇರಿದಂತೆ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.