ರುದ್ರಾಕ್ಷ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸದ್ದು ಗದ್ದಲವಿಲ್ಲದೆ “ಯುವಕರು” ಎನ್ನುವಹೊಸ ಚಿತ್ರ ಒಂದು ತಯಾರಾಗಿದೆ.
ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಬಿ.ಆರ್ ಹಿರೇಮಠ ಅವರ ಮೂಲ ಪರಿಕಲ್ಪನೆಯನ್ನು ಕಥೆಯಾಗಿಸಿ ಚಿತ್ರಕಥೆ ಎಣೆದು, ಸಂಭಾಷಣೆ ಮತ್ತು ಸಾಹಿತ್ಯವನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ ಡಾ. ಗುಣವಂತ ಮಂಜು.
ಡಾ. ಸುಕನ್ಯಾ ಹಿರೇಮಠ ಮತ್ತು ಶ್ರೀಮತಿ ಪವಿತ್ರ ಹಿರೇಮಠ ರವರು ಚಿತ್ರಕ್ಕೆ ನಿರ್ಮಾಪಕರಾಗಿ ಬಂಡವಾಳವನ್ನು ಹೂಡಿದ್ದಾರೆ.
ಶ್ರೀ ಚೇತನ್ ಮತ್ತು ಪವಿತ್ರ ಹಿರೇಮಠ್ ರವರು ನಾಯಕ ನಾಯಕಿಯಾಗಿ ಅಭಿನಯಿಸಿ ಪ್ರಥಮ ಬಾರಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ಮಾದಕ ವಸ್ತುಗಳ ವ್ಯಸನದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಮತ್ತು ಯುವ ಜನತೆ ಇದರಿಂದ ದಾರಿ ತಪ್ಪುತ್ತಿರುವ ಬಗೆಯನ್ನು ವಿವರಿಸಲಾಗಿದೆ. ಹಾಗೂ ಯುವಜನತೆ ವ್ಯಸನಕ್ಕೆ ಒಳಗಾದರೆ ದೇಶಕ್ಕೂ ಹಾನಿ ದೇಹಕ್ಕೂ ಹಾನಿ ಎಂದು ಸಂದೇಶವನ್ನು ನೀಡುವ ಮನೋಜ್ಞವಾದ ಕಥೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ತೆರೆ ಮೇಲೆ ಮೂಡಿಸಲಾಗಿದೆ.
ಸುಮಾರು 50ಕ್ಕೂ ಹೆಚ್ಚು ಹೊಸ ಮತ್ತು ರಂಗಭೂಮಿಯ ಕಲಾವಿದರಿಗೆ ಅವಕಾಶವನ್ನು ನೀಡುವುದು ಚಿತ್ರದ ವಿಶೇಷವಾಗಿದೆ.
ಪ್ರಮುಖ ಪಾತ್ರದಲ್ಲಿ ನಿರ್ಮಾಪಕ ಡಾ.ಸುಕನ್ಯ ಹಿರೇಮಠ್ ಹಾಗೂ ಡಾ. ಬಿ.ಆರ್ ಹಿರೇಮಠ್ ಅಭಿನಯಿಸಿದ್ದಾರೆ. ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಇಂದು ಸಂಜೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ. ವೈ ಪದ್ಮ ನಾಗರಾಜ್ ಮತ್ತು ನಿರ್ದೇಶಕ ಡಾ. ಗುಣವಂತ ಮಂಜು ಸಹ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಿ. ಬಲರಾಮ್ ರವರ ಸಂಗೀತ ಚಿತ್ರಕ್ಕಿದ್ದು, ಬಸಯ್ಯ ಹಿರೇಮಠ ಛಾಯಾಗ್ರಹಣ, ಎಚ್ .ಸಿ .ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ.
ಇತ್ತೀಚಿಗೆ ನಾಡಿನ ಪ್ರತಿಷ್ಠಿತ ಗಣ್ಯಮಾನ್ಯರು, ಸಾಹಿತಿಗಳು, ಮತ್ತು ಪ್ರೇಕ್ಷಕರು ಚಿತ್ರವನ್ನು ವೀಕ್ಷಣೆ ಮಾಡಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಅಬಕಾರಿ ಸಚಿವರಾದ ಸನ್ಮಾನ್ಯ ಶ್ರೀ ತಿಮ್ಮಾಪುರರವರು ಮತ್ತು ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳು ಚಿತ್ರವನ್ನು ವೀಕ್ಷಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಮತ್ತು ಯುವ ಜನತೆಗೆ ಮಾರ್ಗದರ್ಶನವನ್ನು ನೀಡುವ ಚಿತ್ರ ಇದಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಗೋವಾದಲ್ಲಿ ನಡೆದ ದಾದಾಸಾಹೇಬ್ ಅಂತರಾಷ್ಟ್ರೀಯ ಮೋಟಿವೇಷನಲ್ ಸಿನಿಮಾ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಲ್ಲಿ, ಚಿತ್ರಕ್ಕೆ ಪ್ರಶಸ್ತಿ ಲಭ್ಯವಾಗಿದೆ.ಅತ್ಯಂತ ಸಾಮಾಜಿಕ ಕಳಕಳಿ ಮತ್ತು ಭಾವನಾತ್ಮಕವಾದ ಈ ಚಿತ್ರವನ್ನು ಜನ ಒಪ್ಪಿಕೊಳ್ಳುತ್ತಾರೆ ಎಂಬ ದೊಡ್ಡ ಭರವಸೆಯನ್ನು ವ್ಯಕ್ತಪಡಿಸುತ್ತಾರೆ ನಿರ್ದೇಶಕ ಡಾ.ಗುಣವಂತ ಮಂಜು.