ಹೈದರಾಬಾದ್: ಕರ್ನಾಟಕದಲ್ಲಿ ಎರಡು ಹಂತದ ಮತದಾನ ಮುಗಿದ ಬೆನ್ನಲ್ಲೇ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತೆಲಂಗಾಣಕ್ಕೆ ಆಗಮಿಸಿ ಚುನಾವಣಾ ಕಾರ್ಯತಂತ್ರ ದಲ್ಲಿ ತೊಡಗಿದ್ದಾರೆ.
ಗುರುವಾರ ಹೈದರಾಬಾದ್ಗೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರು, ಕಾಂಗ್ರೆಸ್ ಮುಖಂಡ ಸಾಬೀರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಪ್ರದೇಶ ಕಾಂಗ್ರೆಸ್ ಕಚೇರಿಯ ವಾರ್ ರೂಮ್ ಗೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮುತವಲ್ಲಿ ಗಳ ಸಭೆಯಲ್ಲಿ ಪಾಲ್ಗೊಂಡು ಸಿಕಂದರಾಬಾದ್ ಲೋಕಸಭೆ ಕ್ಷೇತ್ರದ ಮುಶಿರಾ ಬಾದ್ ನಲ್ಲಿ ಸಾರ್ವಜನಿಕ ಸಭೆ ಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಜಮೀರ್ ಅಹಮದ್ ಖಾನ್ ಅವರು ಮೂರು ದಿನಗಳ ಕಾಲ ತೆಲಂಗಾಣ ದ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯವಿರುವ ಸಿಕಂದ್ರಾಬಾದ್, ನಿಜಾಮಾಬಾದ್ ವಾರಂಗಲ್, ಮೆಹಬೂಬ್ ನಗರ್, ಕರೀಂ ನಗರ್, ಪೆದ್ದಂಪಲ್ಲೇ ಲೋಕಸಭೆ ಕ್ಷೇತ್ರ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ.ಜತೆಗೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಮುತವಲ್ಲಿ ಗಳು ಸೇರಿದಂತೆ ಪ್ರಮುಖರ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.ಸ್ಟಾರ್ ಪ್ರಚಾರಕರಾಗಿರುವ ಜಮೀರ್ ಅಹಮದ್ ಖಾನ್ ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ತೆಲಂಗಾಣ ದ 56 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಎಐಸಿಸಿ ಸೂಚನೆ ಮೇರೆಗೆ ಲೋಕಸಭೆ ಚುನಾವಣೆ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.