ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಅಪಾಯಕಾರಿ ಜಿಕಾ ವೈರಸ್ ಪತ್ತೆಯಾಗಿದೆ ಸೊಳ್ಳೆಗಳ ರಕ್ತದಲ್ಲಿ ಜಿಕಾ ವೈರಸ್ ಪತ್ತೆ ಹಿನ್ನಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಸೇರಿದಂತೆ ವಿವಿದೆಡೆ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.ರಾಜ್ಯದ 68 ಕಡೆಗಳಲ್ಲಿ ಸೊಳ್ಳೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಮಾರಣಾಂತಿಕ ವೈರಸ್ ಇದೆಯೇ ಎಂದು ಪರಿಣತರು ಪರೀಕ್ಷೆ ನಡೆಸಿದ್ದರು.
ಅದರಂತೆ ಚಿಕ್ಕಬಳ್ಳಾಪುರದ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷಿಸಲಾಗಿತ್ತು. ಸದ್ಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಮಾರಕ ವೈರಸ್ ಪತ್ತೆಯಾಗಿದೆ. ಮಾರಕ ವೈರಸ್ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷ ಸಭೆ ನಡೆಸಿ, ವೈರಸ್ ಹರಡದಂತೆ ತಡೆಯಬೇಕಾದ ಕ್ರಮಗಳ ಬಗ್ಗೆ ಚರ್ಚ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಿಕ್ಕಬಳ್ಳಾಪುರ ಡಿಹೆಚ್ಒ ಡಾ.ಮಹೇಶ್ಕುಮಾರ್, ಅಕ್ಟೋಬರ್ 27ರಂದು ಸೊಳ್ಳೆಗಳಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ.ಆದರೆ ಈವರೆಗೂ ಮನುಷ್ಯನ ರಕ್ತದಲ್ಲಿ ಜಿಕಾ ವೈರಸ್ ಕಂಡು ಬಂದಿಲ್ಲ. ಪರೀಕ್ಷೆಗೆ ಮನುಷ್ಯರ ರಕ್ತದ ಮಾದರಿಯನ್ನು ಲ್ಯಾಬ್ಗೆ ಕಳಿಸಲಾಗಿದೆ. ಮನುಷ್ಯರಲ್ಲಿ ಜಿಕಾ ವೈರಸ್ ಪತ್ತೆಯಾದರೆ ವೇಗವಾಗಿ ಹರಡುತ್ತೆ. ಜಿಕಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದರು.