ಮುಳಬಾಗಿಲು: ಜನರ ಸೇವೆಯೇ ಜನಾರ್ದನ ಸೇವೆ ಎಂಬಂತೆ ಹನುಮಂತು ಅವರು ತಮ್ಮ ಸೇವೆಯನ್ನು ಸಲ್ಲಿಸಿ ಸರ್ಕಾರಿ ವೃತ್ತಿಯಿಂದ ನಿವೃತ್ತಿ ಆಗುತ್ತಿರುವುದು ಅಪಾರ ನಷ್ಟವನ್ನು ಉಂಟು ಮಾಡಿದೆ. ಆದರೂ ಸಹ ನಿವೃತ್ತಿ ಎಂಬುವುದು ಇಲ್ಲಿ ಕಡ್ಡಾಯವಾಗಿದೆ. ಆದ್ದರಿಂದ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಶ್ರೀನಿವಾಸ್ ಹೇಳಿದರು.
ತಾಲೂಕಿನ ಕಾಂತರಾಜ ಸರ್ಕಲ್ ಬಳಿ ಇರುವ ರೇಷ್ಮೆ ಇಲಾಖೆ ಕಚೇರಿಯ ಆವರಣದಲ್ಲಿ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಚ್.ವಿ.ಹನುಮಂತು ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜನರ ಸೇವೆ ಮಾಡುವ ಕೆಲಸ ಸಿಗುವುದು ತುಂಬಾ ವಿರಳ ಅದರಲ್ಲೂ ಜನರ ಅಭಿಪ್ರಾಯವನ್ನು ಗಳಿಸುವುದು ಸುಲಭ ಅಲ್ಲ ಎಂದರು.
ಮರಳಿ ರೇಷ್ಮೆ ಬೆಳೆಯಿರಿ: ಸರ್ಕಾರದ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಉತ್ತಮವಾದ ಅನುದಾನ, ಯೋಜನೆ ಹಾಗೂ ಸೌಲಭ್ಯಗಳು ದೊರೆಯುತ್ತಿದೆ. ಆದ್ದರಿಂದ ರೇಷ್ಮೆ ಬಿಟ್ಟು ಇತರೆ ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರು ಮರಳಿ ರೇಷ್ಮೆಯನ್ನು ಬೆಳೆಯಲು ಮುಂದಾದರೆ ಆರ್ಥಿಕವಾಗಿ ಸದೃಢವಾಗಬಹುದು ಎಂದರು.
ರೇಷ್ಮೆ ಮೊಟ್ಟೆ ಚಾಕಿ ಕಟ್ಟಿಕೊಳ್ಳಲು ಒಂದು ಸಾವಿರ, ಬಿಳಿ ಗೂಡಿಗೆ ತಲಾ ಒಂದು ಕೆಜಿಗೆ 30 ರೂಪಾಯಿ ಪ್ರೋತ್ಸಾಹ ಧನ ಹಾಗೂ ಮನೆ ನಿರ್ಮಾಣಕ್ಕೆ 5 ಲಕ್ಷ ಸೇರಿದಂತೆ ವಿವಿಧ ಬಗೆಯ ಅನುದಾನಗಳು ನೇರವಾಗಿ ರೈತರಿಗೆ ತಲುಪುತ್ತವೆ. ಆದ ಕಾರಣದಿಂದ ಹೆಚ್ಚಿನದಾಗಿ ರೈತರು ರೇಷ್ಮೆ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಭಾವುಕರಾದ ರೈತರು: ಮುಳಬಾಗಿಲು ತಾಲ್ಲೂಕಿನಲ್ಲಿ ಸುಮಾರು 37 ವರ್ಷಗಳ ಕಾಲ ಹನುಮಂತು ಅವರ ಸೇವೆ ತುಂಬಾ ಅವಿಸ್ಮರಣೀಯ ಎಂದು ಸಾಕಷ್ಟು ಮಂದಿ ರೇಷ್ಮೆ ಬೆಳೆಗಾರರು ಭಾವುಕ ನುಡಿಗಳನ್ನು ನುಡಿದರು.ಹನುಮಂತು ಅವರಿಗೆ 500 ರೂಗಳು ವೇತನದಿಂದ ನಾವು ನೋಡಿದ್ದೇವೆ. ಅವರ ಸ್ವಭಾವ ತುಂಬಾ ಮೃದು. ರೇಷ್ಮೆ ಹುಳು ಹಾಗೂ ತೋಟಕ್ಕೆ ಇತರೆ ಯಾವುದೇ ರಾಸಾಯನಿಕ ವಸ್ತುಗಳು ಕೊಂಡುಕೊಳ್ಳಲು ನಮ್ಮ ಬಳಿ ಹಣ ಇಲ್ಲದಿದ್ದಾಗ ಹನುಮಂತು ಅವರು ನೀಡುತ್ತಿದ್ದರು. ಈ ಹಣವನ್ನು ತಿಂಗಳುಗಳ ನಂತರ ನಾವು ಹಿಂತುರಿಗಿಸುತ್ತಿದ್ದೇವು.
ಇಂತಹ ನಂಟನ್ನು ಹೊಂದಿದ ವ್ಯಕ್ತಿ ಈ ದಿನ ನಿವೃತ್ತಿ ಹೊಂದ್ದುತ್ತಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ವ್ಯಕ್ತಿಗೆ ದೇವರು ಒಳ್ಳೆಯ ಆರೋಗ್ಯ ನೀಡಲೆಂದು ರೇಷ್ಮೆ ಬೆಳೆ ರೈತರು ಶುಭ ಆರೈಸಿದರು.ಕೇಂದ್ರ ರೇಷ್ಮೆ ವಿಜ್ಞಾನಿ ನರೇಂದ್ರ ಕುಮಾರ್ ಅವರು ದ್ವಿತಳಿ ರೇಷ್ಮೆ, ರೋಗ ನಿವಾರಣೆ, ಮುನ್ನೆಚ್ಚರಿಕೆಯ ಕ್ರಮಗಳು, ಹಿಪ್ಪನೇರಳೆ ಸೊಪ್ಪು ನಾಟಿ ಮಾಡುವ ವಿಧಾನ, ಕಟಾವು, ಅಂತರದ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ನಿವೃತ್ತಿ ಹೊಂದಿದ ರೇಷ್ಮೆ ವಿಸ್ತರಣಾಧಿಕಾರಿ ಹೆಚ್.ವಿ.ಹನುಮಂತು ಅವರಿಗೆ ತಾಲ್ಲೂಕು ರೇಷ್ಮೆ ಇಲಾಖೆ ಸೇರಿದಂತೆ ರೇಷ್ಮೆ ಉತ್ಪಾದಕರ ಸಂಘ ಮತ್ತು ರೈತರಿಂದ ವಿಶೇಷವಾಗಿ ಸನ್ಮಾನ ಮಾಡಲಾಯಿತು.ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಸಿ.ವೆಂಕಟೇಶಪ್ಪ, ನಿವೃತ್ತ ಅಧಿಕಾರಿ ವೆಂಕಟೇಶಪ್ಪ, ನಿವೃತ್ತಿ ನಿರೀಕ್ಷಕ ಸುಭಾಶ್ ಗಣಪತಿ, ರೇಷ್ಮೆ ಉತ್ಪಾದನೆ ಸಂಘದ ಜಿಲ್ಲಾಧ್ಯಕ್ಷ ಟಿ.ಶಿವಣ್ಣ, ಉಪಾಧ್ಯಕ್ಷ ರವಿಕುಮಾರ್, ರೇಷ್ಮೆ ನಿರೀಕ್ಷಕ ಬಿ.ಜಿ.ಕಾರ್ತಿಕ್, ವಿಸ್ತರಣಾ ಕಾರ್ಯಕರ್ತರಾದ ಎನ್.ಜಾನಕಿರಾಮ್, ಬಿ.ಚಂದ್ರಶೇಖರ್, ರೈತರಾದ ರೇವಣ್ಣ, ಆಂಜಪ್ಪಶೆಟ್ಟಿ, ಕೆ.ಮುರಳಿ, ನಾರಾಯಣ ಸ್ವಾಮಿ ಮತ್ತಿತರರು ಇದ್ದರು.