ಅಖಾಡಕ್ಕೆ ಇಳಿದ್ರೆ ಯಾರಿಗೂ ಜಗ್ಗದ ಮಲ್ಲಿಗೆಪುರದ ಪೈಲ್ವಾನ ಕಥಾನಾಯಕ ರಾಮಣ್ಣ.
ಮಾತೃವಾಕ್ಯ ಪರಿಪಾಲಕನಾಗಿರೋ ಈತ ಆಕಾಶವೇ ತಲೆ ಮೇಲೆ ಬಿದ್ರೂ ಅಮ್ಮನ ಮಾತು ಮೀರೋದಿಲ್ಲ ಅನ್ನೋ ಹಳ್ಳಿ ಹೈದ. ತೊಡೆ ತಟ್ಟಿ ಕುಸ್ತಿ ಗೆಲ್ಲೊ ಇವನು ಅಮ್ಮ ಜಯಮ್ಮನ ಮಾತಿಗೆ ಕಟ್ಟು ಬಿದ್ದು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಜಯಮ್ಮನ ಮರ್ಯಾದೆಗೆ ಕಿಂಚಿತ್ತೂ ಕುತ್ತು ಬರದಂತೆ ಕಾಯೋ ಮುದ್ದಿನ ಮಗ ಈ ಮರ್ಯಾದೆ ರಾಮಣ್ಣ.
ಇನ್ನು ಶ್ರೀಮಂತಿಕೆಯಲ್ಲಿ ಬೆಳೆದಿರೋ ಅಪ್ಸರೆಯಂಥಾ ಹುಡ್ಗಿ ನಮ್ ಕಥಾನಾಯಕಿ ಐಶ್ವರ್ಯ. ತನ್ನ ಮಾತನ್ನೇ ಎಲ್ರೂ ಕೇಳುವಂತೆ ಮಾಡೋ ಅಪ್ಪನ ಮುದ್ದಿನ ಮಗಳು. ತಾನು ಸ್ವಂತ ಕಾಲಿನ ಮೇಲೆ ನಿಂತು, ಫಾರಿನ್ನಿಗೆ ಹೋಗಿ ಸೆಟ್ಲು ಆಗೋದನ್ನೇ ಲೈಫು ಅನ್ಕೊಂಡಿರೋ ಪ್ಯಾಟೆ ಹುಡ್ಗಿ. ಈಕೆ ನೋಡೋಕೆ ಮುದ್ದು, ಆದರೆ ಸಿಡಿಮದ್ದು. ಮದ್ವೆನೇ ಆಗಲ್ಲ ಅನ್ನೋ ಬ್ರಹ್ಮಚಾರಿ ರಾಮಣ್ಣನ ಜೀವ್ನಕ್ಕೆ ಸುಂಟರಗಾಳಿ ಥರ ಇರೋ ಐಶ್ವರ್ಯ ಬಂದ್ರೆ ಮುಂದೇನಾಗುತ್ತೆ? ಅಮ್ಮನಿಗೆ ಕೊಟ್ಟಿರೋ ಮಾತನ್ನು ರಾಮಣ್ಣ ಹೇಗೆ ನಿಭಾಯಿಸ್ತಾನೆ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಸೀರಿಯಲ್ ತಾರಾಬಳಗದಲ್ಲಿ ಹೊಂದಿದ್ದು ನಾಯಕನಾಗಿ ಚೇತನ್ ಚಂದ್ರ, ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ಜೊತೆಗೆ ವೀಣಾಸುಂದರ್, ಸುಂದರ್ ವೀಣಾ , ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತಾ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ.
ಮರ್ಯಾದೆ ರಾಮಣ್ಣ ಸುವರ್ಣದಲ್ಲಿ ಆರಂಭ



