2026ರ ನೀಟ್, ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿತಾದರೂ, ಅದು ಪರಿಸ್ಥಿತಿಯನ್ನು ಸುಧಾರಿಸುವುದಿಲ್ಲ. ಕಾರಣ, ಪರೀಕ್ಷೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ತಿಂದು ಹಾಕಿದೆ.ಇದು ಎಂದೆಂದಿಗೂ ಉದ್ಭವಿಸಬಾರದ ಪರಿಸ್ಥಿತಿ ಎಂಬುದನ್ನು ಮರೆಯಬಾರದು. ನನಗೆ ಗೊತ್ತು, ನೀಟ್ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಎದುರಾಗುವ ಪ್ರಮುಖ ಪರೀಕ್ಷೆ. ಅಲ್ಲದೆ, ಮಧ್ಯಮ ವರ್ಗದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತಿದೆ. ಮುಖ್ಯವಾಗಿ ದೇಶವಾಸಿಗಳ ಆರೋಗ್ಯ ಕಾಪಾಡಲು ಅಗತ್ಯವಿರುವ ಅರ್ಹ ವೈದ್ಯರನ್ನಿಂದು ಒದಗಿಸುತ್ತಿದೆ. ಕೆಲವು ಪೋಷಕರು ಲಕ್ಷಾಂತರ ಹಣವನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಂತಹವು ಇಂತಹ ಭರವಸೆಯನ್ನು ನಾಶಪಡಿಸುತ್ತಿದೆ. ಇದರಿಂದಾಗಿ, ವಿದ್ಯಾರ್ಥಿ ಜೀವನ ಛಿದ್ರವಾಗುತ್ತಿದೆ. ಅವರ ಕುಟುಂಬಗಳು ಅನಿಶ್ಚಿತತೆ ಮತ್ತು ಹತಾಶೆಯಲ್ಲಿ ಸಿಲುಕುತ್ತಿವೆ. ಜೊತೆಗೆ ಭಾವನಾತ್ಮಕ ಆಘಾತ ಕೂಡ ದೊಡ್ಡದಾಗುತ್ತಿದೆ. ವಿದ್ಯಾರ್ಥಿಗಳು ಮತ್ತೆ ಮತ್ತೆ ನೀಟ್ ಪರೀಕ್ಷೆಗೆ ತಯಾರಿ ನಡೆಸುವ ಅನಿವಾರ್ಯತೆಯೂ ಇದೆ. ಹೀಗಾಗಿ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ.ಇವೆಲ್ಲವೂ ಆಡಳಿತ ನಡೆಸುವವರಿಗೆ ಗೊತ್ತಿಲ್ಲ ಎಂದಿಲ್ಲ. ಅರಿವಿದ್ದರೂ ಇವೆಲ್ಲವೂ ಮೌನವಾಗಿ ನಡೆಯುತ್ತಿದೆ. ಇದಿಷ್ಟೇ ಅಲ್ಲದೆ, ಕರ್ನಾಟಕ ಲೋಕಸೇವಾ ಆಯೋಗ, ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ, ಶಿಕ್ಷಕರ ನೇಮಕಾತಿ ಪರೀಕ್ಷೆ ಯೊಂದಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದನ್ನು ಸಹ ನಿಲ್ಲಿಸಲಾಗುತ್ತಿಲ್ಲ.ಇನ್ನೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ನಂತರ ಓಇಇಖಿ 2026ನ್ನು ರದ್ದು ಪಡಿಸಿದನಂತರ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಗಂಭೀರವಾಗಿ ಅತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಇಂತಹ ಹಗರಣ ದೇಶದ ಶಿಕ್ಷಣ ವ್ಯವಸ್ಥೆಯೊಳಗಿನ ನೈತಿಕ ಮತ್ತು ಸಾಂಸ್ಥಿಕ ಅವನತಿಯ ಕಠೋರ ಪ್ರತಿಬಿಂಬವಾಗಿದೆ. ಇದೇನೆ ಇರಲಿ, ನಮ್ಮ ಪರೀಕ್ಷಾ ವ್ಯವಸ್ಥೆ ಅದೆಷ್ಟು ಭ್ರಷ್ಟವಾಗಿದೆ ಎಂಬುದನ್ನಿಂದು ಜಂತರ ಮಂಥರ ಮುಂದೆ ವಿದ್ಯಾರ್ಥಿಗಳು ತಿನ್ನುತ್ತಿರುವ ಲಾಠಿ ಏಟು ಸಾರಿ ಹೇಳುತ್ತಿದೆ. ಇವತ್ತು ಉನ್ನತ ಮಟ್ಟದ ಹಂತದಲ್ಲಿಯೂ ಸಹ ನಕಲು ಮಾಡುವುದನ್ನು ಕ್ಷಮಿಸಲಾಗುತ್ತಿದೆ. ಹೀಗಾಗಿ ಪರೀಕ್ಷಾ ಮಂಡಳಿ, ಕಾಲೇಜು ಮತ್ತು ವಿ.ವಿ ಗಳು ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಗಳ ಕಾರ್ಯಕ್ರಮತೆಯನ್ನು ಅಳೆಯಲು ಸಾಧ್ಯವಾಗದೆ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಇದರಿಂದಾಗಿಯೇ ಕೆಲವೊಂದು ಸಂಸ್ಥೆಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಪರಿಚಯಿಸಿಕೊಂಡಿವೆ.ನಮ್ಮ ದೇಶದಲ್ಲಿ ಲಕ್ಷಾಂತರ ಯುವ ವಿದ್ಯಾರ್ಥಿಗಳು ತಮ್ಮ ಜೀವಮಾನದ ಬಹು ದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ನಿದ್ದೆಗೆಟ್ಟು ಸಿದ್ಧರಾಗುತ್ತಾರೆ. ಇದು ಎಷ್ಟರ ಮಟ್ಟಿಗೆ ಎಂದರೆ, ದೇಶದ ಪ್ರತಿಯೊಂದು ಕುಟುಂಬ ಬಯಸುವ ವರ್ಷಗಳ ಕಾಲದ ತ್ಯಾಗ, ಕಠಿಣ ಪರಿಶ್ರಮ, ತರಬೇತಿ ತರಗತಿಗಳು, ನಿದ್ದೆಯಿಲ್ಲದ ರಾತ್ರಿಗಳನ್ನು ಮತ್ತು ಭಾವನಾತ್ಮಕ ಒತ್ತಡವನ್ನು ಅನುಭವಿಸಿರುತ್ತದೆ. ಇದಕ್ಕಾಗಿ ಪೋಷಕರು ಕೂಡಿಟ್ಟ ತಮ್ಮ ಜೀವಮಾನದ ಉಳಿತಾಯವನ್ನು ಹೂಡಿಕೆ ಮಾಡುತ್ತಾರೆ. ತರಬೇತು ಪಡೆಯುವಾಗ, ವಿದ್ಯಾರ್ಥಿಗಳು ಹಬ್ಬ, ರಜಾದಿನ ಮತ್ತು ಸಾಮಾಜಿಕ ಜೀವನವನ್ನು ಸಹ ತ್ಯಜಿಸುತ್ತಾರೆ. ಹೀಗೆ ಪಡುವ ಪ್ರಯತ್ನ ತಮ್ಮ ಭವಿಷ್ಯವನ್ನು ನ್ಯಾಯಯುತವಾಗಿ ನಿರ್ಧರಿಸುತ್ತವೆ ಎಂಬ ಭರವಸೆಯನ್ನು ಹೊತ್ತಿರುತ್ತಾರೆ.
ನೀಟ್ ವೈಫಲ್ಯ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ..!



