ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದು ಕೆಲ ಗಂಟೆಗಳಲ್ಲಿ ಕೆಲ ಸಚಿವರಲ್ಲಿರುವ ಅಸಮಾಧಾನ ಬಹಿರಂಗಗೊಂಡಿದೆ. ಈಗಾಗಲೇ ತಮಗೆ ನೀಡಿರುವ ಖಾತೆ ವಿರೋಧಿಸಿ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದರ ಬೆನ್ನಲ್ಲೆ ಮತ್ತೋರ್ವ ಹಿರಿಯ ಸಚಿವ ತಮಗೆ ನೀಡಿರುವ ಖಾತೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ತಮಗೆ ನೀಡಿರುವ ಖಾತೆ ಬಗ್ಗೆ ಅತೃಪ್ತ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯವನ್ನು ಹಿರಿಯರಿಗೆ ಮುಟ್ಟಿಸಿದ್ದಾರೆ. ಈ ಸಂಬಂಧ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. 8 ಬಾರಿ ಗೆದ್ದಿದ್ದೇನೆ. ಖಾತೆ ಹಂಚಿಕೆಯಲ್ಲಿ ನನ್ನ ಹಿರಿತನವನ್ನು ಪರಿಗಣಿಸಿಲ್ಲ. ನನಗೆ ಕೊಟ್ಟಿರುವ ಖಾತೆ ಸರಿಯಾಗಿಲ್ಲ. ಈ ಬಗ್ಗೆ ಸಮತೋಲನವಾಗಿ ನೋಡಬೇಕಿತ್ತು. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು ಎಂದು ಹೇಳಿದ್ದಾರೆ. ತಮ್ಮ ಖಾತೆಯನ್ನು ಬದಲಾವಣೆ ಮಾಡಿ ಎಂದು ಖರ್ಗೆಗೆ ಕೋರಿದ್ದಾರೆ. ಜನ ಸೇವೆ ಮಾಡುವ ಖಾತೆಯನ್ನು ನೀಡಿ ಎಂದು ಕೇಳಿದ್ದೇನೆ. ಈಗಾಗಲೇ ಮೂರು ವರ್ಷ ಆಹಾರ ಇಲಾಖೆ ನಿರ್ವಹಿಸಿದ್ದೇನೆ. ಕೃಷಿ ಅಥವಾ ಸಮಾಜ ಇಲಾಖೆ ಖಾತೆ ನೀಡುವಂತೆ ಕೇಳಿದ್ದೇನೆ. ಈ ಬಗ್ಗೆ ವರಿಷ್ಠರ ಬಳಿ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮುನಿಯಪ್ಪ ಮುನಿಸು ಬಹಿರಂಗ



