ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಅಂಬುಲೆನ್ಸ್ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ಸೆಪ್ಟೆಂಬರ್ 20 ರಿಂದ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಕ್ಕಿಳಿಯುವುದಾಗಿ ಸಂಘಟನೆಗಳು ತಿಳಿಸಿವೆ.ಈ ಕುರಿತು `ಸುವರ್ಣ ಕರ್ನಾಟಕ ಆರೋಗ್ಯ ಕವಚ-108 ನೌಕರರ ಸಂಘ' ಹಾಗೂ `ಕರ್ನಾಟಕ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ'ದ ಪದಾಧಿಕಾರಿಗಳು ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿವಿಕೆ ಸಂಸ್ಥೆಯ ಅಧೀನದಲ್ಲಿ ಸುಮಾರು 35,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ನೌಕರರ ಬೇಡಿಕೆಗಳೇನು?* ನೇಮಕಾತಿ ವೇಳೆ ಭರವಸೆ ನೀಡಿದಂತೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. 2017 ರಿಂದ 2022ರ ವರೆಗೆ ಯಾವುದೇ ವೇತನ ಹೆಚ್ಚಳವಾಗಿಲ್ಲ.* 3 ಪಾಳಿಗಳಲ್ಲಿ ಆಂಬುಲೆನ್ಸ್ ವಾಹನದ ಸೌಕರ್ಯ ಒದಗಿಸಬೇಕು. * ವಲಯವಾರು ವಿಂಗಡಣೆ ಮಾಡಿ ನಿಗದಿಪಡಿಸಿರುವ ವೇತನವನ್ನು ರದ್ದುಪಡಿಸಿ, ಎಲ್ಲರಿಗೂ ಏಕರೂಪ ವೇತನ ಜಾರಿಗೊಳಿಸಬೇಕು ಹಾಗೂ ಜ್ಯೇಷ್ಠತೆ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು.